Nirathanka
  • HOME
  • About Us
  • Our Services
    • POSH
    • Awareness Programs
    • Rural & Community Development
    • HR Conference
  • BLOG
  • Join Our Online Groups
  • Photo Gallery
  • Videos
  • Online Store
  • Contact Us
  • HOME
  • About Us
  • Our Services
    • POSH
    • Awareness Programs
    • Rural & Community Development
    • HR Conference
  • BLOG
  • Join Our Online Groups
  • Photo Gallery
  • Videos
  • Online Store
  • Contact Us
Bengaluru Citizen Connect

ಉದ್ದಿಮೆ/ಕೈಗಾರಿಕೆಯಲ್ಲಿ ಮಾನವ ಸಂಬಂಧಗಳ ಪಾತ್ರ (Role of Human Relations in Industry)

4/1/2019

0 Comments

 
Picture
ಗೋವಿಂದರಾಜು ಎನ್.ಎಸ್
ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು
ಕರ್ನ್ ಲಿಬರ್ಸ್ ಇಂಡಿಯಾ ಪ್ರೈ. ಲಿ, ತುಮಕೂರು
ಮಾನವ ಸಂಘಜೀವಿ ಮತ್ತು ಸಮಾಜಜೀವಿ. ತನ್ನ ಅಕ್ಕಪಕ್ಕ ಇತರರು ಇಲ್ಲದಿದ್ದರೆ ಆತನ ಜೀವನವೇ ಇಲ್ಲ. ತನ್ನ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ರೀತಿಯ ಸಂಬಂಧಗಳ ನಡುವೆ ಬದುಕುತ್ತಾನೆ. ಹಾಗಾದರೆ, ಸಂಬಂಧಗಳು ಎಂದರೇನು? ಅಪ್ಪ ಅಮ್ಮ ಇವರ ನಡುವೆ ಮಕ್ಕಳಿಗಿರುವ ಪ್ರೀತಿ ಪ್ರೇಮ ಒಡನಾಟ ಇವು ಸಂಬಂಧಗಳೇ? ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ ಇವರ ನಡುವೆ ಇರುವ ಸಂಬಂಧಗಳು ಸಂಬಂಧಗಳೇ? ಇವೆಲ್ಲವೂ ಸಂಬಂಧಗಳೇ. ನಾವು ಅಂದುಕೊಂಡ ಹಾಗೆಲ್ಲ ಸಂಬಂಧಗಳು ಮತ್ತು ನಾವು ಬೆಳೆಸಿಕೊಂಡ ಹಾಗೆ ಸಂಬಂಧಗಳು. ಒಳ್ಳೆಯ ಸಂಬಂಧಗಳು ಮತ್ತು ಕೆಲವೊಮ್ಮೆ ಒಳ್ಳೆಯವಲ್ಲದ ಸಂಬಂಧಗಳು ನಮ್ಮ ಅನುಭವಕ್ಕೆ ಬರಬಹುದು. ನನ್ನ ಪ್ರಕಾರ, ‘ನಾವು ಹೇಗೆ ಮತ್ತೊಬ್ಬರನ್ನು ಭಾವಿಸುತ್ತೇವೆ, ನಾವು ತೋರುವ ವರ್ತನೆಯ ಸಕಾರಾತ್ಮಕ ತೀವ್ರತೆ, ಅವರೊಡನೆ ಸಹಕರಿಸುವ ರೀತಿ, ಅವರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂಧಿಸುವ ರೀತಿ, ಅವರೊಡನೆ ನಡೆದುಕೊಳ್ಳುವ ರೀತಿ, ತೋರುವ ಪ್ರೀತಿ ವಾತ್ಯಲ್ಯ ಇವೆಲ್ಲವನ್ನೂ ಒಟ್ಟಾರೆಯಾಗಿ ಸಂಬಂಧಗಳು ಎನ್ನಬಹುದು.’
ಸಂಬಂಧಗಳ ಮಹತ್ವವನ್ನು ಅರಿತವರು ಯಾವುದೇ ಕ್ಷೇತ್ರದಲ್ಲಿ ಜಯ ಗಳಿಸಬಹುದು. ಅದರಲ್ಲೂ ಮಾನವ ಸಂಪನ್ಮೂಲ ವೃತ್ತಿಯಲ್ಲಿರುವವರಿಗೆ ಸಂಬಂಧಗಳೇ ಜೀವಾಳ. ಉದ್ಯಮದಲ್ಲಿ ಮಾನವ ಸಂಬಂಧಗಳ ಪಾತ್ರ ಮತ್ತು ಮಹತ್ವ ಅರಿತ ವೃತ್ತಿನಿರತರು ತನ್ನ ಯಶಸ್ಸಿಗೆ ಮತ್ತು ಕಂಪನಿಯ ಹಾಗೂ ಕಾರ್ಮಿಕರ ಅಭಿವೃದ್ಧಿಗೆ ಅವುಗಳನ್ನು ಬಳಸಿಕೊಳ್ಳಬಹುದು ಎನ್ನುವುದರ ಬಗ್ಗೆ ನನ್ನ ಕೆಲವು ವಿಚಾರಧಾರೆಗಳನ್ನು ಈ ಲೇಖನದಲ್ಲಿ ಹೇಳಿದ್ದೇನೆ. ಉದ್ಯಮದ ಮುಖ್ಯ ಉದ್ದೇಶ ಲಾಭ ಗಳಿಸುವುದು ಅಲ್ಲವೆ? ಅಲ್ಲಿ ಸಂಬಂಧಗಳಿಗೇನು ಬೆಲೆ? ಹೀಗಂದುಕೊಂಡವರು ತನ್ನ ಸಹಕಾರ್ಮಿಕರೊಂದಿಗೆ ಸಹಭಾಳ್ವೆ ಸಾಧಿಸಿ ತನ್ನ ಕೆಲಸದಲ್ಲಿ ಸಹಕಾರ ಪಡೆಯುವುದು ಕಷ್ಟವಾಗಬಹುದು. ಯಾಕೆಂದರೆ, ಕಾರ್ಮಿಕರು, ಮಾಲೀಕರು, ವ್ಯವಸ್ಥಾಪಕರು ಇವರೆಲ್ಲರೂ ಮನುಷ್ಯರಲ್ಲವೆ. ಮನುಷ್ಯರಿಲ್ಲದೆ ಉದ್ಯಮವನ್ನು ಊಹಿಸಿಕೊಳ್ಳುವುದು ಸಾಧ್ಯವೆ? ಮುಂದೊಂದು ದಿನ ರೋಬೋಟ್ ತಂತ್ರಜ್ಞಾನ ಮುಂದುವರೆದು ಮನುಷ್ಯರೇ ಇಲ್ಲದ ಉದ್ಯಮಗಳು ಬರಬಹುದು. ಆದರೆ ಆ ರೋಬೋಟ್ ತಯಾರಿಸುವವರು, ನಿರ್ವಹಿಸುವವರು ಯಾರು ಅಂದುಕೊಂಡಾಗಲೆಲ್ಲ ಮನುಷ್ಯರಿಲ್ಲದ ಉದ್ಯಮವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಉದ್ದಿಮೆಯಲ್ಲಿ ಹಲವಾರು ರೀತಿಯ ಸಂಬಂಧಗಳನ್ನು ನೋಡಬಹುದು. ಮಾಲೀಕರು ಕಾರ್ಮಿಕರಿಗಿರುವ ಸಂಬಂಧಗಳು, ವ್ಯವಸ್ಥಾಪಕರು ಮತ್ತು ಅವರ ಕೆಳಗಿರುವ ಅಧಿಕಾರಿಗಳೊಂದಿಗಿರುವ ಸಂಬಂಧಗಳು, ಗ್ರಾಹಕರು, ಪೂರೈಕೆದಾರರು, ಸರ್ಕಾರಿ ಅಧಿಕಾರಿಗಳು, ಸುತ್ತಮುತ್ತಲ ಸಾಮಾನ್ಯ ಜನತೆ ಇವರೆಲ್ಲರ ಜೊತೆಗೆ ಸರಿಯಾದ ರೀತಿಯ ಸಂಬಂಧಗಳನ್ನು ನಿರ್ವಹಿಸಿದರೆ ಮಾತ್ರ ಉದ್ಯಮ ಮುಂದುವರಿಯಲು ಸಾಧ್ಯ. ಈ ಸಂಬಂಧಗಳು ಹದಗೆಟ್ಟಾಗ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡ ಉದ್ಯಮಗಳ ಉದಾಹರಣೆಗಳು ಬಹಳಷ್ಟು ನಮಗೆ ಸದಾ ಸಿಗುತ್ತಲೇ ಇರುತ್ತವೆ.
​
ಮಾನವ ಸಂಪನ್ಮೂಲ ಅಧಿಕಾರಿಯಾಗಿ ಉದ್ಯಮದಲ್ಲಿ ಆತನ ಮುಖ್ಯ ಕೆಲಸವೆಂದರೆ ಸಂಬಂಧಗಳ ನಿರ್ವಹಣೆ ಎಂದರೆ ತಪ್ಪಾಗಲಾರದು. ಕೆಲವು ಕಂಪನಿಗಳಲ್ಲಿ ಈಗಾಗಲೇ ಮಾನವ ಸಂಪನ್ಮೂಲ ವ್ಯವಸ್ಥಾಪಕ ಎನ್ನುವುದರ ಬದಲು ಮಾನವ ಸಂಬಂಧಗಳ ವ್ಯವಸ್ಥಾಪಕ (Human Relation Manager) ಎಂದು ಈಗಾಗಲೇ ಬದಲಿಸಿಕೊಂಡಿರುವ ಉದಾಹರಣೆಗಳನ್ನು ನಾವು ನೋಡಿದ್ದೇನೆ. ತನ್ನ ವೃತ್ತಿಯಲ್ಲಿ ಆತನ ಯಶಸ್ಸು ಆತನು ಯಾವ ರೀತಿಯ ಸಂಬಂಧಗಳನ್ನು ಬೆಳೆಸಿಕೊಂಡು ಅವುಗಳನ್ನು ನಿರ್ವಹಿಸುವಲ್ಲಿ ಸಫಲನಾಗಿದ್ದಾನೆ ಎನ್ನುವುದರ ಆಧಾರದ ಮೇಲೆ ನಿಂತಿರುತ್ತದೆ. ನೌಕರರು, ಕಾರ್ಮಿಕರು, ಕಾರ್ಮಿಕ ಮುಖಂಡರು, ಗ್ರಾಹಕರು, ಪೂರೈಕೆದಾರರು, ಮಾಲೀಕರು, ಸರ್ಕಾರಿ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ಸುತ್ತಮುತ್ತಲಿನ ಜನತೆ, ಸಂಘ ಸಂಸ್ಥೆಗಳು, ಕಂಪನಿಯ ಉನ್ನತಾಧಿಕಾರಿಗಳು, ಅಕ್ಕಪಕ್ಕದ ಕಂಪನಿಗಳು ಮತ್ತು ಅಲ್ಲಿನ ಅಧಿಕಾರಿಗಳು, ಮಾದ್ಯಮಗಳು, ರಾಜಕೀಯ ವ್ಯಕ್ತಿಗಳು, ಕಂಪನಿ ಬಿಟ್ಟು ಹೋದ ನೌಕರರು ಇವರೆಲ್ಲರ ನಡುವೆ ಆತನು ಸಾಧಿಸಿರುವ ಸಂಬಂಧಗಳ ತೀವ್ರತೆ ಆತನ ಯಶಸ್ಸನ್ನು ನಿರ್ಧರಿಸುತ್ತದೆ. ಮಾನವ ಸಂಪನ್ಮೂಲ ಅಧಿಕಾರಿಯು ತನ್ನ ವೃತ್ತಿಯಲ್ಲಿ ನಿರ್ವಹಿಸಬೇಕಾದ ವಿವಿಧ ಸಂಬಂಧಗಳಿಗೆ ಕೆಳಗಿನ ಚಿತ್ರಣವನ್ನು ನೋಡಿ. 
Picture
ಈ ಕೆಳಗಿನ ಕೆಲವೊಂದು ಪ್ರಶ್ನೆಗಳನ್ನು ಗಮನಿಸಿ!
  • ಮಾನವ ಸಂಪನ್ಮೂಲ ಅಧಿಕಾರಿ ಕಂಪನಿಯಲ್ಲಿ ಇಲ್ಲದೇ ಇರುವ ಒಂದು ದಿನ ಕಾರ್ಮಿಕ ಇಲಾಖೆಯ ಒಬ್ಬರು ಅಧಿಕಾರಿಗಳು ಹಠಾತ್ತನೆ ಕಂಪನಿಗೆ ಪರಿವೀಕ್ಷಣೆಗೆಂದು ಭೇಟಿ ಕೊಟ್ಟಾಗ ಅವರು ಕೇಳಿದ ಮಾಹಿತಿಗಳನ್ನು ಕೊಡಲು ಆತನ ಸಹೋದ್ಯೋಗಿಗಳು ಕೊಡಲು ಸಾಧ್ಯಾವಾಗದಿದ್ದಾಗ, ಆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ?
  • ಕೈಗಾರಿಕೆಯಲ್ಲಿ ಒಂದು ತೀವ್ರ ಅಪಘಾತವುಂಟಾಗಿ ಕಾರ್ಮಿಕನೊಬ್ಬನ ಪ್ರಾಣಕ್ಕೆ ಮಾರಕವಾಯಿತೆಂದುಕೊಳ್ಳಿ. ಆ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಹೇಗೆ ತಿಳಿಗೊಳಿಸಿ ನಿಭಾಯಿಸುವುದು?
  • ಕಂಪನಿಯ ವಿರುದ್ದ ಕೆಲವು ದುಷ್ಕರ್ಮಿಗಳು ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಕೊಟ್ಟರು ಎಂದುಕೊಳ್ಳೋಣ. ಈ ಸಂದರ್ಭದಲ್ಲಿ ಕಂಪನಿಯ ಹಿತಾಸಕ್ತಿಗಳನ್ನು ಹೇಗೆ ಕಾಪಾಡಿಕೊಳ್ಳುವುದು?
  • ಕೆಲವು ಸಂಘ ಸಂಸ್ಥೆಗಳು ಸರ್ಕಾರದ ವಿರುದ್ದ ಹೋರಾಟ ನಡೆಸಲು ಮುಷ್ಕರಕ್ಕೆ ಕರೆಕೊಟ್ಟ ಸಂದರ್ಭದಲ್ಲಿ ನಿಮ್ಮ ಕಂಪನಿಯ ಮಾಲೀಕರು ಕಂಪನಿಯನ್ನು ಆ ದಿನ ನಡೆಸಲೇಬೇಕಾದ ಅನಿವಾರ್ಯತೆಯನ್ನು ನಿಮ್ಮ ಮುಂದಿಟ್ಟರು ಎಂದುಕೊಳ್ಳಿ. ಈ ಪರಿಸ್ಥಿತಿಯನ್ನು ನಿಭಾಯಿಸಿ ಹೇಗೆ ಆ ದಿನ ಉತ್ಪಾದನೆ ನಡೆಯಲು ಅನುವು ಮಾಡಿಕೊಡುತ್ತೀರಿ?
ಹೀಗೆ ಎಷ್ಟೋ ದಿನನಿತ್ಯದ ಸಂದರ್ಭಗಳನ್ನು ಕೊಡುತ್ತಾ ಹೋಗಬಹುದು. ಇವುಗಳಿಗೆಲ್ಲ ಉತ್ತರ ಸಂಬಂಧಗಳ ನಿರ್ವಹಣೆ ಮತ್ತು ಅದರಿಂದ ಕೆಲಸ ಸಾಧಿಸುವುದು. ಈ ರೀತಿಯ ಸಮಸ್ಯೆಗಳು ಉದ್ಭವಿಸಿದಾಗ ಮಾನವ ಸಂಪನ್ಮೂಲ ಅಧಿಕಾರಿಯು ಬೆಳೆಸಿಕೊಂಡು ಹಾಗೂ ನಿರ್ವಹಿಸಿಕೊಂಡು ಬಂದ ಸಂಬಂಧಗಳು ಕೆಲಸಕ್ಕೆ ಬರುತ್ತವೆ.  ಈ ಎಲ್ಲರೊಂದಿಗೆ ತನ್ನ ಸಂಬಂಧಗಳು ಸರಿ ಇಲ್ಲದಿದ್ದರೆ ಆತನು ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದರ ಜೊತೆಗೆ ಕಂಪನಿಯನ್ನೂ ಸಹ ಸಮಸ್ಯೆಗೆ ಸಿಕ್ಕಿ ಹಾಕಿಸಬಹುದು.

ಇದರ ಮತ್ತೊಂದು ಆಯಾಮವನ್ನು ನೋಡೋಣ. ಸಂಬಂಧಗಳು ಮತ್ತು ಬಾಂಧವ್ಯಗಳು ಎರಡೂ ಒಂದೇ ರೀತಿಯವೇ ಅಥವಾ ಬೇರೆ ಬೇರೇಯೆ? ನನ್ನ ಪ್ರಕಾರ ಇವೆರಡೂ ಒಂದೇ ವಿಚಾರಕ್ಕೆ ಸಂಬಂಧಿಸಿದವುಗಳು. ಆದರೆ, ವ್ಯತ್ಯಾಸವೆಂದರೆ, ಸಂಬಂಧಗಳು ಗಟ್ಟಿಯಾಗಿ ಹೆಚ್ಚು ಅತ್ಮೀಯತೆ, ನಂಬಿಕೆ, ವಿಶ್ವಾಸ ಬೆಳೆಯುತ್ತಾ ಹೋದಂತೆ ಸಂಬಂಧಗಳು ಬಾಂಧವ್ಯಗಳಾಗಿ ಮಾರ್ಪಡುತ್ತವೆ.

ಕಾರ್ಮಿಕ ಬಾಂಧವ್ಯಗಳ ನಿರ್ವಹಣೆ ನನ್ನ ನೆಚ್ಚಿನ ವಿಷಯ. ಈ ವಿಚಾರದಲ್ಲಿ ಈಗಾಗಲೇ ನನ್ನ ಎರಡು ಪುಸ್ತಕಗಳು ಪ್ರಕಟವಾಗಿವೆ. ಇದರಲ್ಲಿ ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆಗೆ ಬೇಕಾದ ಎಲ್ಲ ಸಲಕರಣೆಗಳನ್ನು ವೃತ್ತಿನಿರತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕದ ಮುಖಾಂತರ ಕೊಟ್ಟಿದ್ದೇನೆ. ಕಾರ್ಮಿಕ ಬಾಂಧವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೆ ಕಂಪನಿಗಳು ಮುಚ್ಚಿ ಹೋದ ಪ್ರಕರಣಗಳು ಸಾಕಷ್ಟಿವೆ. ಹಾಗೇನೆ, ಉತ್ತಮವಾಗಿ ಕಾರ್ಮಿಕ ಬಾಂಧವ್ಯಗಳನ್ನು ನಿರ್ವಹಿಸಿಕೊಂಡು ಯಶಸ್ಸು ಸಾಧಿಸಿರುವ ಕಂಪನಿಗಳ ಉದಾಹರಣೆಗಳೂ ಇವೆ.

ಮಾನವ ಸಂಪನ್ಮೂಲ ಅಧಿಕಾರಿಯ ಜವಾಬ್ಧಾರಿಗಳಲ್ಲಿ ಸಂಬಂಧಗಳ ನಿರ್ವಹಣೆಯ ಮಹತ್ವವನ್ನು ಹೇಳಬೇಕಾದರೆ ಅದಕ್ಕೊಂದು ಕಥೆಯನ್ನು ನಾನು ಹೇಳಲೇಬೇಕು.

ನಾನು ಕೆಲಸ ಮಾಡಿದ ಕಂಪನಿಯಲ್ಲಿ ನಡೆದ ನೈಜ ಕಥೆ ಇದು. ನಾನು ಒಂದು ವಾರ ಊರಿನಲ್ಲಿ ಇಲ್ಲದೇ ಇರುವಾಗ ನನಗೆ ತಿಳಿಯದೆ ಕಂಪನಿಯ ಮುಖ್ಯಸ್ಥರು ಕಾರ್ಖಾನೆಯಲ್ಲಿನ ಯಂತ್ರವೊಂದನ್ನು ಕಳಚಿ ಬೇರೆ ಕಡೆಗೆ ಕಳುಹಿಸಲು ನಿರ್ಧರಿಸಿ ಆ ಯಂತ್ರವನ್ನು ಕಳಚಲು ಪ್ರಾರಂಭಿಸಿದಾಗ ಕಾರ್ಮಿಕ ಮುಖಂಡರು ಅದನ್ನು ತಡೆದು ಕಾರ್ಮಿಕರೆಲ್ಲರೂ ಧರಣಿ ಕುಳಿತುಕೊಳ್ಳಲು ನಿರ್ಧರಿಸುತ್ತಾರೆ. ಕಾರ್ಖಾನೆಯ ಮುಖ್ಯಸ್ಥರು ಎಷ್ಟು ಹೇಳಿದರೂ ಅವರ ಮಾತಿಗೆ ಬೆಲೆ ಕೊಡದೆ ಅಲ್ಲಿನ ಕಾರ್ಮಿಕ ನಾಯಕರು ನನಗೆ ದೂರವಾಣಿಯಲ್ಲಿ ಮಾತನಾಡಿ, ಸಾರ್ ನೀವು ಇಲ್ಲದಿರುವಾಗ ಹಾಗೂ ನಮಗೆ ತಿಳಿಸದೆ ಯಂತ್ರವನ್ನು ಕಳಚಿ ಹೊರಗೆ ಕಳುಹಿಸುತ್ತಿರುವ ಪ್ರಯತ್ನ ನಮ್ಮ ಹಿತಾಸಕ್ತಿಗಳಿಗೆ ವಿರುದ್ದವಾಗಿದೆ. ಈಗ ನಾವು ಏನು ಮಾಡಬೇಕು ಸಾರ್ ಎಂದು ಕೇಳುತ್ತಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ನಾನು ಅವರ ದೂರವಾಣಿಯಿಂದಲೇ ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡಿ ಸಾರ್ ನೀವು ಯಂತ್ರವನ್ನು ಕಳಚಿ ಪ್ಯಾಕಿಂಗ್ ಮಾಡಿಕೊಂಡಿರಿ. ಆದರೆ, ಯಾವುದೇ ಕಾರಣಕ್ಕೂ ನಾನು ಬರುವವರೆಗೂ ಅದನ್ನು ಹೊರಗಡೆ ಕಳುಹಿಸಬೇಡಿ ಎಂದು ಹೇಳಿ ನಂತರ ಆ ಕಾರ್ಮಿಕ ಮುಖಂಡರಿಗೆ ಮಾತನಾಡಿ ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತೆ ಇದರಲ್ಲಿ ಕಂಪನಿಯ ಮುಖ್ಯಸ್ಥರಿಂದ ದುರುದ್ದೇಶವೇನೂ ಇಲ್ಲ. ಅದರಿಂದ ಸದುದ್ದೇಶವೇ ಇದೆ. ನಾನು ಬರುವವರೆಗೂ ಯಂತ್ರವನ್ನು ಹೊರಗಡೆ ಕಳುಹಿಸಬಾರದು ಎಂದು ಹೇಳಿದ್ದೇನೆ. ಅವರು ಕಳಚಿ ಪ್ಯಾಕಿಂಗ್ ಮಾಡಿಕೊಳ್ಳಲಿ. ನಾನು ಬಂದ ಮೇಲೆ ಈ ವಿಚಾರದ ಬಗ್ಗೆ ಮಾತನಾಡಿ ಮುಂದುವರೆಯೋಣ. ಈಗ ಕಾರ್ಮಿಕರು ಧರಣಿ ಕುಳಿತುಕೊಳ್ಳುವುದಾಗಲೀ, ಕಂಪನಿಯ ಕೆಲಸಗಳಿಗೆ ತೊಂದರೆ ಮಾಡುವುದಾಗಲೀ ಬೇಡ ಎಂದು ಹೇಳಿದಾಗ ಆಯ್ತು ಸಾರ್. ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ನೀವು ಬಂದ ಮೇಲೆ ಮಾತನಾಡೋಣ. ನಾನು ಕಾರ್ಮಿಕರಿಗೆ ಎಂದಿನಂತೆ ಕೆಲಸ ಮುಂದುವರೆಸಲು ಹೇಳುತ್ತೇನೆ ಎಂದು ಕರೆಯನ್ನು ಇಟ್ಟರು. ಆನಂತರ ಅದರಂತೆ ನಡೆದುಕೊಂಡರು. ನಾನು ಕಂಪನಿಗೆ ಮರಳಿದ ನಂತರ ಈ ವಿಚಾರವನ್ನು ಮುಖ್ಯಸ್ಥರ ಜೊತೆ ಚರ್ಚಿಸಿದಾಗ ತಿಳಿದು ಬಂದಿದ್ದೇನೆಂದರೆ ಈ ಯಂತ್ರ ತುಂಬ ಹಳೆಯದಾಗಿದ್ದು ಇದರ ಬದಲಿಗೆ ಮತ್ತೊಂದು ಹೊಸ ಯಂತ್ರ ಬರುತ್ತಿದೆ ಎಂದು ಅದರ ಮಾಹಿತಿಗಳನ್ನು ನನಗೆ ನೀಡಿದರು. ಕಾರ್ಮಿಕ ಮುಖಂಡರನ್ನು ಕರೆದು ಈ ವಿಚಾರಗಳನ್ನು ತಿಳಿಸಿ ನಿಮ್ಮ ಉದ್ಯೋಗಕ್ಕಾಗಲಿ, ನಿಮ್ಮ ಹಿತಾಸಕ್ತಿಗಳಿಗಾಗಲಿ ಇದರಿಂದ ತೊಂದರೆ ಬರದು ಆ ಯಂತ್ರ ಹೋಗಲಿಬಿಡಿ. ಹೊಸ ಯಂತ್ರ ಬರುತ್ತದೆ. ಇದಕ್ಕೆ ನಾನು ಜವಾಬ್ಧಾರಿ ಎಂದು ಹೇಳಿದಾಗ. ಅದೆಲ್ಲ ಏನೂ ಬೇಡ ಬಿಡಿ ಸಾರ್. ನಿಮ್ಮ ಮಾತೆ ನಮಗೆ ಸಾಕು. ನಾವು ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಹೇಳಿ ಅವರು ಹೊರಟುಬಿಟ್ಟರು.

ಇಲ್ಲಿ ಕೆಲಸಕ್ಕೆ ಬಂದಿದ್ದು ಏನು? ಮುಖ್ಯಸ್ಥರ ನಿರ್ಧಾರವು ಸದುದ್ದೇಶದಿಂದ ಕೂಡಿದ್ದರೂ ಅದನ್ನು ನಂಬದಿರಲು ಏನು ಕಾರಣ? ಇಲ್ಲಿ ಕೆಲಸಕ್ಕೆ ಬಂದಿದ್ದು ಯಾವುದೇ ಬುದ್ದಿಶಕ್ತಿಯೂ ಅಲ್ಲ ಅಥವಾ ಚಾಕಚಕ್ಯತೆಯೂ ಅಲ್ಲ. ಕಾರ್ಮಿಕರು ಮತ್ತು ಕಾರ್ಮಿಕ ಮುಖಂಡರು ಮಾನವ ಸಂಪನ್ಮೂಲ ಅಧಿಕಾರಿಯ ಮೇಲೆ ಇಟ್ಟ ನಂಬಿಕೆ, ವಿಶ್ವಾಸ ಮತ್ತು ಹೊಂದಿದ್ದ ಬಾಂಧವ್ಯ.
​
ಕಾರ್ಮಿಕರು ಮತ್ತು ಕಾರ್ಮಿಕ ನಾಯಕರ ನಡುವೆ ಉತ್ತಮ ಬಾಂಧವ್ಯಗಳನ್ನು ಸಾಧಿಸಬೇಕಾದರೆ ಕೆಲವು ಪ್ರಯತ್ನಗಳು ಮತ್ತು ತತ್ವಗಳು ಅವಶ್ಯಕವಾಗುತ್ತವೆ. ಅವುಗಳಲ್ಲಿ ಕೆಲವೊಂದನ್ನು ಮಾತ್ರ ಹೇಳುತ್ತೇನೆ.

  • ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಸಮಸ್ಯೆಗಳನ್ನು ಪರಿಹರಿಸುವುದು.
  • ಕಾರ್ಮಿಕರ ವಯಕ್ತಿಕ ಸಭೆ, ಸಮಾರಂಭಗಳಿಗೆ ತಪ್ಪದೇ ಹಾಜರಾಗಿ ಅವರೊಡನೆ ಅವರ ಖುಷಿಯನ್ನು ಹಂಚಿಕೊಳ್ಳುವುದು.
  • ಅವರು ವಯಕ್ತಿಕ ಸಮಸ್ಯೆಗಳಿಗೆ ಸಿಕ್ಕಿ ಹಾಕಿಕೊಂಡರೆ ಕೈಲಾದಷ್ಟು ಅವುಗಳಿಗೆ ಸ್ಪಂಧಿಸುವುದು.
  • ಕಾರ್ಮಿಕರ ಹಕ್ಕುಗಳು ಮತ್ತು ಮಾಲೀಕರ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು.
  • ಸಾಮೂಹಿಕ ಚೌಕಾಸಿಗೆ ಬೆಲೆ ಕೊಟ್ಟು ಆ ಮುಖಾಂತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವುದು.
  • ಕಾರ್ಮಿಕರ ಶೋಷಣೆ ಮತ್ತು ಅನ್ಯಾಯೋಚಿತ ನಡವಳಿಕೆಗಳನ್ನು ಮಾಡದಿರುವುದು.
  • ಕಾರ್ಮಿಕರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ನಮ್ಮ ದಾರಿಗೆ ಎಳೆದುಕೊಂಡು ಬರುವುದು.
  • ಕಾನೂನು ನಿಯಮಗಳನ್ನು ಉಲ್ಲಂಘಿಸದಿರುವುದು.
  • ಎರಡೂ ಪಕ್ಷಗಳ ಗೆಲುವಿನಲ್ಲಿ ವಿಶ್ವಾಸ ಇಟ್ಟು ಮುಂದುವರಿಯುವುದು.
  • ಕಂಪನಿಯ ಅಭಿವೃದ್ಧಿಯಲ್ಲಿ ಮತ್ತು ನಿರ್ಧಾರಗಳಲ್ಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳುವುದು.
  • ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಕೆಲಸಗಳಲ್ಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳುವುದು.
ಹೀಗೆ ಇನ್ನೂ ಅನೇಕ ಪ್ರಯತ್ನಗಳು, ಕೆಲಸಗಳು ಮತ್ತು ವಿಚಾರಗಳು ಕಾರ್ಮಿಕರೊಂದಿಗೆ ಬಾಂಧವ್ಯಗಳನ್ನು ಹೆಚ್ಚಿಸಿ ಯಾವುದೇ ಸಮಸ್ಯೆಯಿಲ್ಲದೆ ಕಂಪನಿಯನ್ನು ಪ್ರಗತಿಪರವಾಗಿ ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುತ್ತವೆ. ನನ್ನ ಪುಸ್ತಕದಲ್ಲಿ ಇನ್ನೂ ಅನೇಕ ವಿಚಾರಗಳನ್ನು ತಂದಿದ್ದೇನೆ. ಆಸಕ್ತರು ಅದನ್ನು ಕೊಂಡು ಓದಬಹುದು.
0 Comments

Your comment will be posted after it is approved.


Leave a Reply.

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Picture
    Join Now

    Inviting Articles

    Picture
    Know More
    Human Resources And Labour Law Classes

    RSS Feed



SITE
  • ​Home
  • About Us
  • Blog
  • Join Our Online Groups
  • Photo Gallery
  • Videos
  • Online Store
HR ONLINE GROUPS ​
20,000 HR PROFESSIONALS ARE CONNECTED THROUGH OUR NIRATHANKA HR GROUPS. YOU CAN ALSO JOIN AND PARTICIPATE IN OUR GROUP DISCUSSIONS.
Join
OFFICE ADDRESS
No. 326, 2nd Floor, Opp. Canara Bank, Near Dr. AIT College, Kengunte, Mallathahalli, Bengaluru-560056.
  • 080-23213710
  • 8073067542
  • nirathankango@gmail.com
© COPYRIGHT : Nirathanka, 2021.
Website Designed and Developed by : www.nirutapublications.org



  • HOME
  • About Us
  • Our Services
    • POSH
    • Awareness Programs
    • Rural & Community Development
    • HR Conference
  • BLOG
  • Join Our Online Groups
  • Photo Gallery
  • Videos
  • Online Store
  • Contact Us