ಎಸ್.ವಿ. ಮಂಜುನಾಥ್ ಸಹನಿರ್ದೇಶಕರು, ಅಜೀ಼ಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ, ಕರ್ನಾಟಕ ಕಾರ್ಮಿಕ ಸಂಘಗಳೊಂದಿಗಿನ ನನ್ನ ಒಡನಾಟವು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಪ್ರಮುಖ ಭಾಗವಾಗಿದ್ದು ನೇರವಾಗಿ ನಾನು ಪಡೆದ ಅನುಭವಗಳ ಹಲವಾರು ಮಜಲುಗಳನ್ನು ಇಲ್ಲಿ ತೆರೆದಿಡುವ ಪ್ರಯತ್ನ ನನ್ನದು. ನನ್ನ ಅನುಭವಗಳನ್ನು ಹಂಚಿಕೊಳ್ಳುವ ಮುನ್ನ ಕಾರ್ಮಿಕ ಸಂಘಗಳು ಕೈಗಾರಿಕೆಗಳಲ್ಲಿ ಯಾವ ಸಾಂದರ್ಭಿಕ ಹಿನ್ನೆಲೆಯಲ್ಲಿ ಪ್ರಸ್ತುತ ಕಾರ್ಯಪ್ರವೃತ್ತವಾಗಿವೆ ಎಂಬುದನ್ನು ಅರಿಯುವುದು ಅಗತ್ಯವಾಗಿದೆ. ಕಾರ್ಮಿಕ ಸಂಘಗಳ ಕಾರ್ಯನಿರ್ವಹಣೆಯ ಸಾಂದರ್ಭಿಕ ಹಿನ್ನೆಲೆ - ಕಳೆದ ಎರಡು ದಶಕಗಳ ಹಿನ್ನೋಟ : ನನ್ನ ವೃತ್ತಿ ಜೀವನದ ಪ್ರಾರಂಭದ ಅವಧಿ (1990) ಹಾಗೂ ಅದರ ಸುತ್ತಮುತ್ತಲಿನ ಕಾಲಾವಧಿಯಲ್ಲಿಯೇ ವಿಶ್ವದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪ್ರಮುಖ ಬದಲಾವಣೆಗಳಾದವು. 1. ಪಶ್ಚಿಮ ಜರ್ಮನಿ ಮತ್ತು ಪೂರ್ವ ಜರ್ಮನಿಗಳ ವಿಭಜನೆಯ ಸಂಕೇತವಾಗಿದ್ದ `ಬರ್ಲಿನ್ ವಾಲ್ ಅನ್ನು ನವೆಂಬರ್ 1989ರಲ್ಲಿ ಕೆಡವುದರ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಗೊಂಡಿದ್ದ ಪಶ್ಚಿಮ ಜರ್ಮನಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಬದ್ಧವಾಗಿದ್ದ ಪೂರ್ವ ಜರ್ಮನಿಗಳೆರಡೂ ಒಂದಾಗಿ ಬೆರೆತು ಎರಡೂ ವೈರುಧ್ಯ ಸಂಸ್ಕೃತಿಗಳ ಮಿಲನಕ್ಕೆ ನಾಂದಿಯಾಯಿತು. ಇದರಿಂದಾಗಿ ಅಭಿವೃದ್ಧಿ ಕುರಿತಾದ ಎಲ್ಲ ರಾಷ್ಟ್ರಗಳ ಕಣ್ಣೋಟ ಸ್ಪಷ್ಟವಾಗಿದ್ದಲ್ಲದೆ ಪಾಶ್ಚಿಮಾತ್ಯ ಅಥವಾ ಪೂರ್ವಪರ ಧೋರಣೆಗಳೆಂಬ ವಿಭಜನೆ ಮುರಿದುಬಿದ್ದು `ವಿಶ್ವಮಾನ್ಯ ಧೋರಣೆಯೊಂದು ಸ್ಥಾಪಿತವಾಯಿತು.
2. ಬರ್ಲಿನ್ ಗೋಡೆಯ ಪತನದ ತರುವಾಯದಲ್ಲೇ ಯೂನಿಯನ್ ಆಫ್ ಸೋವಿಯತ್ ಸೋಷ್ಯಲಿಸ್ಟ್ ರಿಪಬ್ಲಿಕ್ (USSR) ನ ಅಧ್ಯಕ್ಷರಾಗಿದ್ದ ಶ್ರೀ ಮಿಖಾಯೆಲ್ ಗೊರ್ಬಚೆವ್ ಅವರು ಅತ್ಯಂತ ದೂರಾಲೋಚನೆಯ, ಕ್ರಾಂತಿಕಾರಿ ಕ್ರಮಗಳಾದ ಪೆರೆಸ್ತ್ರೋಯ್ಕ ಮತ್ತು ಗ್ಲಾಸ್‍ನಾಸ್ಟ್‍ಗಳ ಮೂಲಕ ಪರಂಪರೆಯಿಂದ ಪುರಾತನ ಸೋಷ್ಯಲಿಸ್ಟ್ ಸಿದ್ಧಾಂತಕ್ಕೆ, ಕೇಂದ್ರೀಯ ಯೋಜನಾ ವ್ಯವಸ್ಥೆಗೆ ಬದ್ಧವಾಗಿದ್ದ ರಾಷ್ಟ್ರವನ್ನು ಕಮ್ಯುನಿಸಮ್‍ನ ಸೈದ್ಧಾಂತಿಕ ಮುಷ್ಟಿಯಿಂದ ಹೊರಬರುವಂತೆ ಮಾಡಿ ಜನರು ಪ್ರಜಾಪ್ರಭುತ್ವಾದಿ, ಮುಕ್ತ ಮಾರುಕಟ್ಟೆ, ಆರ್ಥಿಕ ವ್ಯವಸ್ಥೆಯೊಂದಿಗೆ ಬೆರೆಯಲು ಅನುವು ಮಾಡಿಕೊಟ್ಟರು. ಈ ಕ್ರಮದಿಂದಾಗಿ ಸುಮಾರು ವರ್ಷಗಳ ಕಾಲ ರಷ್ಯಾ ದೇಶದಲ್ಲಿ ಆಂತರಿಕವಾಗಿ ಅಲ್ಲೋಲ-ಕಲ್ಲೋಲ ಸ್ಥಿತಿ ನಿರ್ಮಾಣಗೊಂಡು ಶ್ರೀ ಗೊರ್ಬಚೆವ್‍ರ ಪದಚ್ಯುತಿಯಲ್ಲಿ ಪರ್ಯವಸಾನಗೊಂಡದ್ದು ಒಂದು ವಿಪರ್ಯಾಸದ ಸಂಗತಿ. 3. ಸೋವಿಯತ್ ಅಧಿಪತ್ಯ ಅಂತ್ಯಗೊಂಡ ಮೇಲೆ ರಷ್ಯಾ ಮತ್ತು ಯು.ಎಸ್.ಎ. ನಡುವಿನ ಶೀತಲ ಸಮರದ ಅಂತ್ಯವಾಗಿ ವಿಶ್ವಶಾಂತಿಗೆ ನಾಂದಿಯಾಯಿತು. 4. 1989ರ ಸಮಯದಲ್ಲೇ ಇರಾಕ್ ಮೇಲೆ ಅಮೆರಿಕಾ ತನ್ನ ಮೊದಲ ಸಮರ ನಡೆಸಿ, ತೈಲ ಬಿಕ್ಕಟ್ಟು ನಿರ್ಮಾಣವಾಗಿತ್ತು. 5. ಚೀನಾ ದೇಶವು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಬದ್ಧವಾಗಿದ್ದುಕೊಂಡರೂ ತನ್ನ ಕಟ್ಟುನಿಟ್ಟಾದ ಆರ್ಥಿಕ ನೀತಿಗಳನ್ನು ಸಡಿಲಿಸಿ 1980ರ ದಶಕದಿಂದ ಪ್ರಾರಂಭಗೊಂಡು ಕೈಗಾರೀಕರಣ ಧೋರಣೆಯನ್ನು ಯಥೇಚ್ಛವಾಗಿ ಅನುಸರಿಸುತ್ತ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತಿತ್ತು. 6. ಭಾರತವೂ ಸಹ ಶ್ರೀ ಪಿ.ವಿ. ನರಸಿಂಹರಾವ್, ಶ್ರೀ ಮನಮೋಹನ್ ಸಿಂಗ್‍ರ ಜೋಡಿಯ ಮೂಲಕ ಆರ್ಥಿಕ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಾರಂಭಿಸಿತು. 7. ಇದಕ್ಕೂ ಮುನ್ನ, ಅಂದರೆ 1980ರ ದಶಕದಲ್ಲಿ ಬ್ರಿಟನ್‍ನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಮಾರ್ಗರೆಟ್ ಥ್ಯಾಚರ್‍ರವರು ಬ್ರಿಟನ್‍ನ ಕೈಗಾರಿಕಾ ವಲಯದಲ್ಲಿ ತಲೆದೋರಿದ್ದ ಅಸ್ಥಿರತೆ ಮತ್ತು ಉತ್ಪಾದನಾ ನಷ್ಟವನ್ನು ಹೋಗಲಾಡಿಸಲು ಕಾರ್ಮಿಕ ಸಂಘಗಳನ್ನು ಬಗ್ಗುಬಡಿಯಲು ಕಾನೂನಿನಲ್ಲಿ ಅನೇಕ ದಿಟ್ಟ ಬದಲಾವಣೆಗಳನ್ನು ತಂದು ಕಾರ್ಮಿಕ ಸಂಘಗಳ ಪ್ರಾಮುಖ್ಯತೆ ಇಳಿಮುಖವಾಗಲು ಕಾರಣರಾದರು. ಈ ಕ್ರಮಗಳಿಂದ ಅವರನ್ನು Iron Lady ಎಂದು ಕರೆಯಲಾಯಿತು. 8. ಬಹುತೇಕ ಎಲ್ಲ ರಾಷ್ಟ್ರಗಳೂ, ಅದರಲ್ಲೂ ಭಾರತ, ಬ್ರೆಜಿಲ್, ಚೀನಾ ಮತ್ತು ಹಿಂದಿನ ಸೋವಿಯತ್ ರಾಷ್ಟ್ರಗಳು ವಿಶ್ವಮಾರುಕಟ್ಟೆಯೊಂದಿಗೆ ಬೆರೆತ ಮೇಲೆ ಆಮದು/ರಫ್ತು ವಹಿವಾಟು ಮುಕ್ತವಾಗಿ ನಡೆಯುತ್ತಿದ್ದು ವಿಶ್ವದ ಯಾವುದೇ ಭಾಗದಿಂದ ಅತ್ಯುತ್ತಮ ಪದಾರ್ಥಗಳು / ಸೇವೆಗಳು ಕಡಿಮೆ ಬೆಲೆಯಲ್ಲಿ ಮಾರಲ್ಪಡುತ್ತದೋ ಅದನ್ನು ಖರೀದಿಸಲು ಗ್ರಾಹಕ ಹಾತೊರೆಯುವಂತಾಯಿತು. 9. ಮಾಹಿತಿ ತಂತ್ರಜ್ಞಾನದ ಕ್ರಾಂತಿ ನಮ್ಮ ಜೀವನದಲ್ಲಿ ಪ್ರವೇಶಿಸಿದ ಮೇಲಂತೂ ಕ್ರಾಂತಿಕಾರಿ ಬದಲಾವಣೆಗಳು ನಡೆದು ದೇಶ-ದೇಶಗಳ ನಡುವೆ ಸಮಾಜ-ಸಮಾಜಗಳ ನಡುವೆ ವ್ಯಕ್ತಿ-ವ್ಯಕ್ತಿಗಳ ನಡುವೆ ಇದ್ದ ಕಂದಕಗಳನ್ನು ಒಮ್ಮೆಲೇ ಹೋಗಲಾಡಿಸಿತು. ಗ್ಲೋಬಲ್ ವಿಲೇಜ್‍ನ ಹುಟ್ಟಿಗೆ ಕಾರಣವಾಯಿತು. ಆರ್ಥಿಕ ವ್ಯವಸ್ಥೆಗಳನ್ನು ರೂಪಿಸುವ ರೀತಿ, ಬ್ಯಾಂಕಿಂಗ್ ವ್ಯವಸ್ಥೆ, ಯೋಜನೆಗಳ ಅನುಷ್ಠಾನ, ಸಂಸ್ಥೆಗಳು ಲಾಭ-ನಷ್ಟಗಳನ್ನು ಲೆಕ್ಕ ಹಾಕುವ ರೀತಿ-ಹಲವಾರು ವಿಧಗಳಲ್ಲಿ ಸಾಮಾನ್ಯ ಮಾನದಂಡಗಳನ್ನು ವಿಶ್ವದೆಲ್ಲೆಡೆ ಬಳಸಿಕೊಳ್ಳುವಂತಾಯಿತು. 10. ಭಾರತದ `ಸಾಫ್ಟ್ವೇರ್ ಕ್ರಾಂತಿ ಬೆಂಗಳೂರಿನಿಂದಲೇ ಪ್ರಾರಂಭವಾಗಿ ಪಾಶ್ಚಿಮಾತ್ಯ ದೇಶಗಳು ತಮ್ಮ ಆರ್ಥಿಕ ವ್ಯವಸ್ಥೆಯ ಅನೇಕ ಚಟುವಟಿಕೆಗಳನ್ನು ಭಾರತದ ಹೊಸ ಸಾಫ್ಟ್‍ವೇರ್ ಸಂಸ್ಥೆಗಳಿಗೆ ರವಾನಿಸಿ ಔಟ್ ಸೋರ್ಸಿಂಗ್‍ನ ಆರಂಭಕ್ಕೆ ಮೊದಲಾಯಿತು. ಇದರಿಂದ ಅನೇಕ ಮಧ್ಯಮ ವರ್ಗದ ಕುಟುಂಬಗಳ ಯುವಕ-ಯುವತಿಯರಿಗೆ ಉತ್ತಮ ಅವಕಾಶಗಳೊದಗಿ ಸಾಮಾಜಿಕ-ಆರ್ಥಿಕ ಬದಲಾವಣೆಗೆ ನಾಂದಿಯಾಯಿತು. ಥಾಮಸ್ ಫ್ರೈಡ್‍ಮ್ಯಾನ್‍ರ ದ ವರ್ಲ್ಡ್ ಈಸ್ ಫ್ಲಾಟ್ ಎಂಬ ಗ್ರಂಥದಲ್ಲಿ ಮೇಲಿನ ಬದಲಾವಣೆಗಳನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ. ಈ ಮೇಲಿನ ಬದಲಾವಣೆಗಳಾಗುವ ಮುನ್ನ ಕೈಗಾರಿಕೆಗಳಲ್ಲಿ ಕಾರ್ಮಿಕ ಸಂಘಗಳು ಬಲಿಷ್ಠವಾಗಿದ್ದು ತಮ್ಮ ಹಕ್ಕುಗಳ ಸಾಧನೆಗಾಗಿ ಹಠಾತ್ ಮುಷ್ಕರಗಳಿಗೆ ಹೆಚ್ಚಾಗಿ ಮೊರೆ ಹೋಗುತ್ತಿದ್ದುದರಿಂದ ಕೈಗಾರಿಕೆಗಳು ಮತ್ತು ಕಾರ್ಮಿಕ ವರ್ಗಗಳೆರಡೂ ನಷ್ಟ ಅನುಭವಿಸುತ್ತಿದ್ದುದಲ್ಲದೆ ಸಮಾಜದ ಮೇಲೂ (ಗ್ರಾಹಕರಿಗೆ ಅಗತ್ಯ ವಸ್ತುಗಳ / ಸೇವೆಗಳ ಪೂರೈಕೆ ರದ್ದುಪಡಿಸುತ್ತಿದ್ದುದರಿಂದ) ತೀವ್ರ ಪರಿಣಾಮವುಂಟಾಗುತ್ತಿತ್ತು. ಮೇಲಿನ ತೀವ್ರ ಬದಲಾವಣೆಗಳ ತರುವಾಯದಲ್ಲಿ ಭಾರತದ ಉತ್ಪಾದನಾ ಕ್ಷೇತ್ರದಲ್ಲಿಯೂ ಮಾರ್ಪಾಡುಗಳಾಗಿ ಕೈಗಾರಿಕಾ ಸಂಬಂಧಗಳ ಸ್ವರೂಪದ ಮೇಲೆ ಪರಿಣಾಮವುಂಟಾಯಿತು. ಹಿಂದಿನ ತೀವ್ರಗಾಮಿ ಧೋರಣೆಗಳು, ಗಡುಸಾದ ನಿಲುವುಗಳು, ಸಂಕುಚಿತ ದೃಷ್ಟಿಕೋನಗಳು - ಇವುಗಳಿಗೆ ಹೊಸ ಯುಗದಲ್ಲಿ ಸ್ಥಾನವಿಲ್ಲದಂತಾಯಿತು. ಭಾರತದ ಕೈಗಾರಿಕೆಗಳು ವಿಶ್ವದ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯಬೇಕಾಯಿತು. ಈ ಸನ್ನಿವೇಶದಲ್ಲಿ ಗ್ರಾಹಕನೇ ದೊರೆಯಾಗಿ, ಆತನ ಬೇಡಿಕೆಗಳನ್ನು ಪೂರೈಸಲು ನಮ್ಮೆಲ್ಲ ಶಕ್ತಿಗಳನ್ನೂ ಒಗ್ಗೂಡಿಸಿ, ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಆಡಳಿತ ವರ್ಗ - ಕಾರ್ಮಿಕ ಸಂಘಗಳೆರಡೂ ತಮ್ಮ ಭೇದ-ಭಾವಗಳನ್ನು ತೊರೆದು ಕೈಗಾರಿಕೆಗಳ ರಕ್ಷಣೆಗಾಗಿ, ಉದ್ಯೋಗಗಳ ರಕ್ಷಣೆಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅನೇಕ ಮಹಾನ್ ಸಂಸ್ಥೆಗಳು ಈ ಹೊಸ ಬದಲಾವಣೆಗಳಿಗೆ ಒಗ್ಗಿಕೊಳ್ಳದೆ ಅವಸಾನವಾದ ಉದಾಹರಣೆಗಳು ಎಲ್ಲರ ಕಣ್ಣುಗಳನ್ನು ತೆರೆಸಿತು. ಈ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಭಾರತದ ಪ್ರಗತಿಪರ ಕೈಗಾರಿಕೆಗಳು ತಮ್ಮ ಕೈಗಾರಿಕಾ ಸಂಬಂಧಗಳಿಗೆ ಸಂಬಂಧಿಸಿದ ಧೋರಣೆಯನ್ನು ಬದಲಾಯಿಸಿಕೊಳ್ಳತೊಡಗಿತು. ಈ ನಿಟ್ಟಿನಲ್ಲಿ ಕೆಳಗಿನ ಎರಡು ಮಹತ್ತರ ಸೈದ್ಧಾಂತಿಕ ಮಾರ್ಪಾಡುಗಳಾದುವು. ಅ) ಕೈಗಾರಿಕಾ ಸಂಬಂಧಗಳಿಗೆ ಸಂಬಂಧಿಸಿದ ನೀತಿಯು ಸಂಸ್ಥೆಯು ಒಟ್ಟಾರೆ ಧ್ಯೇಯ/ಗುರಿಗಳನ್ನು ತಲುಪಲು ಬೇಕಾದ ಪೂರಕ ನೀತಿಯಾಗಿ ರೂಪುಗೊಂಡಿತು. ಆ) ಸಾಂಸ್ಥಿಕ ಗುರಿಗಳ ಸಾಧನೆಗಾಗಿ ಮಾನವ ಸಂಪನ್ಮೂಲದ ಅಭಿವೃದ್ಧಿಯು ಪ್ರಮುಖ ಸಾಧನವಾಗಿ ಹೊರಹೊಮ್ಮಿತಲ್ಲದೆ ಇದರ ಭಾಗವಾಗಿ ಆಡಳಿತವರ್ಗ, ಕಾರ್ಮಿಕ ಸಂಘಗಳ ನಡುವಿನ ಸಂಬಂಧಗಳು ಮಾರ್ಪಾಡಾದುವು. ಪ್ರಗತಿಪರ ಹಾದಿಯಲ್ಲಿಯೇ ಮುಂದುವರೆದ ಕೈಗಾರಿಕೆಗಳು ತಮ್ಮ ಉಳಿವಿಗಾಗಿ, ಧ್ಯೇಯಗಳ ಸಾಧನೆಗಾಗಿ ಅನೇಕ ಹೊಸ ಬದಲಾವಣೆಗಳನ್ನು ಅಳವಡಿಸಿಕೊಂಡವು. ಅವುಗಳಲ್ಲಿ ಕೆಲವು ಪ್ರಮುಖವಾದವುಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ : 1) ವಿಶ್ವವು ಅನೇಕ ತ್ವರಿತಗತಿಯ ಬದಲಾವಣೆಗಳಿಂದಾಗಿ ಕುಗ್ಗುತ್ತಿದ್ದು ಸ್ಪರ್ಧಾಯುಗದಲ್ಲಿ ಉಳಿಯಬೇಕಿದ್ದಲ್ಲಿ ಕೈಗಾರಿಕೆಗಳು, ಸೇವಾ ಸಂಸ್ಥೆಗಳು ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನೇ ಗ್ರಾಹಕರಿಗೆ ನೀಡಬೇಕಾಗುತ್ತದೆ. ಹಾಗಿಲ್ಲದಿದ್ದಲ್ಲಿ ಸಂಸ್ಥೆಗಳು ಸ್ಪರ್ಧೆಯಲ್ಲಿ ಹಿಂದೆ ಬಿದ್ದು ಅವಸಾನವಾಗುವುದಲ್ಲದೆ ಸಾವಿರಾರು ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ. 2) ಅತ್ಯುತ್ತಮ ವಸ್ತು ಅಥವಾ ಸೇವೆಯನ್ನು ನೀಡಲು ಎಲ್ಲ ಸಂಸ್ಥೆಗಳೂ ದುಡಿಯಬೇಕಿದ್ದು ಉದ್ಯೋಗಿಗಳು ಮನೋಭಾವ, ಕೌಶಲ್ಯ ಮತ್ತು ಜ್ಞಾನಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕಾಗಿದೆ. ಕಾರ್ಮಿಕ ಸಂಘಗಳು ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯಿಂದ ಸಹಕರಿಸಬೇಕಾಗಿದೆ. 3) ಉತ್ಪಾದಕತೆ, ಗುಣಮಟ್ಟದ ಹೆಚ್ಚಳ, ವೆಚ್ಚಗಳ ಬಗೆಗಿನ ಅರಿವು, ನಿರುಪಯುಕ್ತ ಕ್ರಮಗಳನ್ನು ಕಡಿತಗೊಳಿಸುವುದು-ಇವು ಆಡಳಿತವರ್ಗದ ಗುರಿಯಾಗಿದ್ದು, ಕಾರ್ಮಿಕ ಸಂಘಗಳೂ ಇವುಗಳ ಸಾಧನೆಗಾಗಿ ಕೈಜೋಡಿಸಬೇಕಾಗಿದೆ. 4) ಇಂದಿನ ಪರಿಸ್ಥಿತಿಯಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ, ಉತ್ಪಾದಕತೆಯ ಹೆಚ್ಚಳ - ಇನ್ನೂ ಇತರ ಕ್ರಮಗಳಿಂದಾಗಿ ಕಡಿಮೆ ಸಂಖ್ಯೆಯ ಉದ್ಯೋಗಿಗಳು ಹೆಚ್ಚು ಕೆಲಸ ಮಾಡುವುದು ಸಾಧ್ಯವಾಗಿದೆ. ಒಟ್ಟಾರೆ ಕೈಗಾರಿಕೆಗಳ ಸಂಖ್ಯೆ ಹೆಚ್ಚಾದರೂ ಅಸಹ ಅದೇ ಪ್ರಮಾಣದಲ್ಲಿ ಇದರಿಂದಾಗಿ ಹೊಸ ಉದ್ಯೋಗಗಳ ನಿರ್ಮಾಣವಾಗುತ್ತಿಲ್ಲವೆಂಬುದು ಗಮನಾರ್ಹ ಅಂಶವಾಗಿದೆ. 5) ವೇತನ ಹೆಚ್ಚುವರಿಗೆ ಸಂಬಂಧಿಸಿದ ಒಪ್ಪಂದಗಳನ್ನು ಸಹಿ ಮಾಡುವಾಗ ಕಾರ್ಮಿಕರ ಬೇಡಿಕೆಗಳ ಜೊತೆಜೊತೆಗೆ ಆಡಳಿತ ವರ್ಗದ ಪ್ರತಿ ಬೇಡಿಕೆಗಳೂ ಚರ್ಚಿಸಲ್ಪಡುತ್ತಿದ್ದು ಉತ್ಪಾದಕತೆಗೆ ಸಂಬಂಧಿಸಿದ ಅಂಶಗಳೂ ಒಪ್ಪಂದಗಳಲ್ಲಿ ಅಳವಡಿಕೆಯಾಗುತ್ತಿವೆ. ಇದರಿಂದಾಗಿ ಹೆಚ್ಚುವರಿ ವೇತನ ಪಡೆಯಬೇಕಿದ್ದರೆ ಇನ್ನೂ ಹೆಚ್ಚಿನ ಪರಿಶ್ರಮ ಮತ್ತು ಕಾಣಿಕೆಗಳನ್ನು ಕಾರ್ಮಿಕವರ್ಗ ನೀಡಬೇಕೆಂದು ಕಾರ್ಮಿಕ ಸಂಘಗಳು ತಮ್ಮ ಸದಸ್ಯರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. 6) ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಯತ್ನಿಸುತ್ತಿರುವ ನಮ್ಮ ದೇಶ, ಆ ಗುರಿಯನ್ನು ತಲುಪಲು ಕೆಳವರ್ಗದ ಜನ ಮಧ್ಯಮ ವರ್ಗಕ್ಕೂ, ಮಧ್ಯಮ ವರ್ಗದ ಜನ ಮೇಲ್ವರ್ಗಕ್ಕೂ ಮೇಲೇರಲು ಕನಸು ಕಾಣುತ್ತಿರುವ ಸಂದರ್ಭದಲ್ಲಿ ಜನರ ಜೀವನದ ಶೈಲಿಗಳು ಬದಲಾಗುತ್ತಿದ್ದು, ಹೆಚ್ಚಿನ ಬೇಡಿಕೆಗಳನ್ನು ಪೂರೈಸಿಕೊಳ್ಳಬೇಕಿದೆ. ಕಾರ್ಮಿಕ ಸಂಘಗಳು ಒಂದೆಡೆ ಈ ಬೇಡಿಕೆಗಳ ಪೂರೈಕೆಗಾಗಿ ಹೋರಾಡಬೇಕಾಗಿರುವುದಲ್ಲದೆ ಮತ್ತೊಂದೆಡೆ ಉತ್ಪಾದಕತೆಯನ್ನು ಹೆಚ್ಚಿಸಬೇಕೆಂಬ ವಿರುದ್ಧವಾದ ಪ್ರತಿಬೇಡಿಕೆಯನ್ನು ಕಾರ್ಮಿಕರ ಮುಂದೆ ಇಡಬೇಕಾದ ಕಷ್ಟಸಾಧ್ಯವಾದ ಪಾತ್ರವನ್ನು ನಿರ್ವಹಿಸಬೇಕಾಗಿದೆ. 7) ತಮ್ಮ ಉತ್ಪಾದನಾ ವೆಚ್ಚಗಳನ್ನು ಕಡಿತಗೊಳಿಸಲು ಆಡಳಿತವರ್ಗಗಳು (ವೇತನ ಒಪ್ಪಂದಗಳ ಮೂಲಕ ಅನೇಕ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕ ವರ್ಗದ ವೇತನದ ಮಟ್ಟ ಹೆಚ್ಚಾಗುತ್ತಿರುವುದರಿಂದ ಒಟ್ಟು ವೆಚ್ಚಗಳು ಮೇಲೇರುತ್ತಿರುವುದರಿಂದ) ಹಲವಾರು ಕೆಲಸಗಳನ್ನು ಹೊರಗಿನ ಮೂಲಗಳಿಂದ ಮಾಡಿಸಿಕೊಳ್ಳುವುದಾಗಲೀ ಅಥವಾ ಗುತ್ತಿಗೆ ಆಧಾರದ ಮೇಲೆ ನಿಗದಿಪಡಿಸುವ ಮೂಲಕವಾಗಲಿ ವಿಧವಿಧವಾದ ಕ್ರಮಗಳನ್ನು ಜಾರಿಗೊಳಿಸುತ್ತಯಿವೆ. (ಯೂರೋಪ್ ಮತ್ತು ಅಮೆರಿಕಾ ದೇಶಗಳಿಂದ ಭಾರತ, ಚೀನಾ ಮತ್ತಿತರ ದೇಶಗಳಿಗೆ ಹಲವಾರು ಉದ್ಯೋಗಗಳು ರವಾನಿಸಲ್ಪಟ್ಟಿರುವುದೂ ಇದೇ ಕಾರಣದಿಂದಾಗಿಯೇ.) 8) ಇಂದಿನ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದ, ಕೆಲಸಕ್ಕೆ ಗೈರುಹಾಜರಾಗುವ ಅನುತ್ಪಾದಕ ಕಾರ್ಮಿಕರಿಗೆ (ಅವರು ಸುಧಾರಿಸಿಕೊಳ್ಳಲು ನೀಡಿದ ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ವಿಫಲರಾದ ಮೇಲೆ) ಅವರ ವಿರುದ್ಧ ಶಿಸ್ತಿನ ಕ್ರಮಗಳನ್ನು ಜಾರಿಗೊಳಿಸಿ ಅವರನ್ನು ಸಂಸ್ಥೆಯಿಂದ ಕಾನೂನಿನ ರೀತಿ ವಜಾ ಮಾಡುವುದಲ್ಲದೆ ಸಂಸ್ಥೆಗಳು ಆಗಿಂದಾಗ್ಗೆ ಸ್ವಯಂ ನಿವೃತ್ತಿ ಯೋಜನೆಯ ಮೂಲಕ ಅಧಿಕ ವೆಚ್ಚದ ಕಾರ್ಮಿಕರಿಗೆ ಸ್ವಯಂ ನಿವೃತ್ತಿಯ ಬಾಗಿಲಿನ ಮೂಲಕ ನಿರ್ಗಮಿಸುವ ಹಾದಿಯನ್ನು ನಿರ್ಮಿಸಲಾಗುತ್ತಿದೆ. 9) ಎಪ್ಪತ್ತು-ಎಂಭತ್ತರ ದಶಕಗಳಲ್ಲಿ ಮುಷ್ಕರ ಕಾರ್ಮಿಕರ ಸಂಘಗಳ ಕೈಯಲ್ಲಿ ಪ್ರಮುಖ ಆಯುಧವಾಗಿದ್ದಿತು. ತಮ್ಮ ಹಕ್ಕುಗಳ ಸಾಧನೆಗಾಗಿ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಕರೆಗಳನ್ನು ನೀಡಿ ಉತ್ಪಾದನಾ ನಷ್ಟವನ್ನನುಭವಿಸುವಂತೆ ಮಾಡಿ ಆಡಳಿತ ವರ್ಗಗಳ ಮೇಲೆ ಒತ್ತಡ ಹೇರುವ ಸಾಧನವಾಗಿ ಕಾರ್ಮಿಕ ಸಂಘಗಳು ಹೇರಳವಾಗಿ ಬಳಸುತ್ತಿದ್ದವು. ಆದರೆ ಈ ದಿನಗಳಲ್ಲಿ ಯಾವ ಕಾರ್ಮಿಕರೂ ಮುಷ್ಕರಕ್ಕೆ ಬೆಂಬಲ ನೀಡುವ ಸ್ಥಿತಿಯಲ್ಲಿಲ್ಲ. ಬ್ಯಾಂಕ್‍ಗಳಿಂದ, ಹಣಕಾಸು ಸಂಸ್ಥೆಗಳಿಂದ, ಲೇವಾದೇವಿ ವ್ಯವಹಾರ ನಡೆಸುವವರಿಂದ ಮನೆಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಹಾಗೂ ವೈಯಕ್ತಿಕ ಸಾಲ - ಹೀಗೆ ಹಲವಾರು ಸಾಲಗಳನ್ನು ತೆಗೆದುಕೊಂಡು ಮಾಸಿಕ ಕಂತುಗಳಲ್ಲಿ ಸಾಲ ತೀರಿಸುವ ಶರತ್ತಿಗೆ ಒಪ್ಪಿಕೊಂಡಿರುವುದರಿಂದಲೂ, ಇತರ ದೈನಂದಿನ ಖರ್ಚುಗಳನ್ನು ಭರಿಸಲು ತಮ್ಮ ಸಂಬಳದ ಮೇಲೆಯೇ ಅವಲಂಬಿತರಾಗಿರುವುದರಿಂದಲೂ ಅವರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಮುಷ್ಕರಗಳಿಂದಾಗಿ ಅವರ ಜೀವನ, ಸಾಂಸಾರಿಕ ಸ್ಥಿರತೆ ಹದಗೆಡುತ್ತವೆ. 10) ಆಡಳಿತವರ್ಗಗಳು ಕಾರ್ಮಿಕರ ಕಲ್ಯಾಣಕ್ಕೆಂದು ರೂಪಿಸಲಾದ ನಾಡಿನ ಎಲ್ಲ ಕಾನೂನು ನಿಯಮಗಳನ್ನು ಪಾಲಿಸಬೇಕಲ್ಲದೆ ಹೊರದೇಶಗಳ ಗ್ರಾಹಕರೂ ಸಹ ಈ ದೇಶದ ಎಲ್ಲ ನಿಯಮಗಳನ್ನು ಸಂಸ್ಥೆ ಪಾಲಿಸುತ್ತಿವೆಯೇ ಎಂಬುದನ್ನು ಖಾತರಿ ಪಡಿಸಿಕೊಂಡ ನಂತರವೇ ಸಂಸ್ಥೆಗಳೊಂದಿಗೆ ವ್ಯವಹರಿಸುತ್ತವೆ. ಕಾನೂನು ಪರಿಪಾಲನೆಯ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆಗೆ ಸಹ ಸಂಸ್ಥೆ ಬದ್ಧವಾಗಿರಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಹಿಂದಿನ ದಶಕಗಳಲ್ಲಿದ್ದಂತೆ ಸಂಸ್ಥೆಗಳಿಂದ ಕಾರ್ಮಿಕರಿಗೆ ಸಂದಾಯವಾಗಬೇಕಾದ ಸವಲತ್ತುಗಳನ್ನು ವಿಸ್ತರಿಸುವಲ್ಲಿ ಯಾವುದೇ ವಂಚನೆ ಅಥವಾ ಮೋಸವೆಸಗುವ ಪರಿಸ್ಥಿತಿಗಳು ಈ ದಿನಗಳಲ್ಲಿ ಕಾಣಸಿಗುವುದು ವಿರಳ. ಇದರಿಂದಾಗಿ ಹಿಂದೆ ಕಾರ್ಮಿಕ ಸಂಘಗಳು ಕೈಗೆತ್ತಿಕೊಂಡು ಹೋರಾಟ ಮಾಡಬೇಕಾಗಿದ್ದ ಮೂಲ ವಿಷಯಗಳ ಸ್ವರೂಪದಲ್ಲಿಯೇ ಬದಲಾವಣೆಯಾಗಿವೆ. 11) ಮೇಲಾಗಿ ಈ ಸ್ಪರ್ಧಾಯುಗದಲ್ಲಿ ಒಳ್ಳೆಯ ಪ್ರತಿಭೆಗಳನ್ನು, ನುರಿತ ಕಾರ್ಮಿಕರನ್ನು ಸಂಸ್ಥೆಯಿಂದ ಕಳೆದುಕೊಳ್ಳುವ ಸ್ಥಾನದಲ್ಲಿ ಸಂಸ್ಥೆಗಳು ಇಲ್ಲವೇ ಇಲ್ಲ. ಸಕಾರಾತ್ಮಕ, ಉತ್ತೇಜನದಾಯಕ ಮಾನವ ಸಂಪನ್ಮೂಲ ನಿಯಮಗಳನ್ನು ರೂಪಿಸುವ ಮೂಲಕ ಒಳ್ಳೆಯ ಪ್ರತಿಭಾವಂತರನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳುವುದು ಹೇಗೆ ? ಎಂಬುದರ ಬಗ್ಗೆ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕಿದೆ. 12) ಹೊಸ ಹೊಸ ಘಟಕಗಳನ್ನು ನಿರ್ಮಿಸುವಾಗ ಆಡಳಿಉತ ವರ್ಗಗಳೇ ಉದ್ಯೋಗಿಗಳ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅವರ ನಿರೀಕ್ಷೆಗಳ ಈಡೇರಿಕೆಗೆ ಸೂಕ್ತ ವಾತಾವರಣವನ್ನು ನಿರ್ಮಿಸುವ ಮೂಲಕ ಕಾರ್ಮಿಕ ಸಂಘಗಳ ಸ್ಥಾಪನೆಯೇ ಆಗದಂತೆ ಎಚ್ಚರವಹಿಸುತ್ತಿವೆ. 13) ಕೈಗಾರಿಕಾ ಕ್ಷೇತ್ರಕ್ಕೆ ಹೊಸದಾಗಿ ಪಾದಾರ್ಪಣೆ ಮಾಡುತ್ತಿರುವ ಹೊಸ ಜನಾಂಗದ ಕಾರ್ಮಿಕರು ಶೈಕ್ಷಣಿಕವಾಗಿ, ಬೌದ್ಧಿಕವಾಗಿ, ಹೆಚ್ಚು ಚುರುಕಾಗಿರುವುದರಿಂದ ಅವರು ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಹೊಂದಿದ್ದಾರೆ. ಒಣ ಬೋಧನೆಯನ್ನು ಕೇಳಿ ಒಪ್ಪಿಕೊಂಡು ಹಿಂದಿರುಗುವುದಿಲ್ಲ. ಕಾರ್ಮಿಕ ಸಂಘಗಳ ಜವಾಬ್ದಾರಿ ಈ ನಿಟ್ಟಿನಲ್ಲಿ ಅಧಿಕವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಕಾರ್ಮಿಕ ಸಂಘಗಳ ಕಾರ್ಯ ವೈಖರಿಯಲ್ಲಿ ಬದಲಾವಣೆಗಳಾಗಿವೆ. ವಿವಿಧ ಕಾರ್ಮಿಕ ಸಂಘಗಳೊಂದಿಗಿನ ನನ್ನ ಅನುಭವಗಳು : ನನ್ನ ವೃತ್ತಿ ಬದುಕಿನಲ್ಲಿ ಕಾರ್ಮಿಕ ಸಂಘಗಳೊಂದಿಗೆ ಸಂಬಂಧಗಳನ್ನು ಯಾವ ರೀತಿ ರೂಪಿಸಿಕೊಳ್ಳಬೇಕೆಂದು ಅರಿವಿಗೆ ತಂದುಕೊಟ್ಟ ಸಂಸ್ಥೆ ಬಿ.ಇ.ಎಲ್. 1) ಬಿ.ಇ.ಎಲ್.ನಲ್ಲಿ ನಾನು ಕೆಲಸಕ್ಕೆ ಸೇರಿದಾಗ ನಾಲ್ಕು ಪ್ರಮುಖ ಕಾರ್ಮಿಕ ಸಂಘಗಳು ಅಸ್ತಿತ್ವದಲ್ಲಿದ್ದವು. ಈ ಸಂಘಗಳಲ್ಲಿ ಎರಡು ಸಂಘಗಳು ಎಡಪಕ್ಷಗಳಾದ ಸಿ.ಪಿ.ಐ. ಮತ್ತು ಸಿ.ಪಿ.ಐ. (ಎಂ)ನ ಅಂಗ ಸಂಸ್ಥೆಗಳಾದ ಎ.ಐ.ಟಿ.ಯು.ಸಿ. ಮತ್ತು ಸಿ.ಐ.ಟಿ.ಯು.ಗಳಿಗೆ ಹೊಂದಿಕೊಂಡಿದ್ದು, ಮತ್ತೊಂದು ಸಂಘ ಬಿ.ಜೆ.ಪಿ.ಯ ಕಾರ್ಮಿಕ ಘಟಕವಾದ ಬಿ.ಎಂ.ಎಸ್.ಗೂ ಹಾಗೂ ನಾಲ್ಕನೆಯದು ಕಾಂಗ್ರೆಸ್‍ನ ಅಂಗ ಸಂಸ್ಥೆಯಾದ ಇಂಟಕ್ನೊಂದಿಗೂ ಹೊಂದಿಕೊಂಡಿದ್ದುವು. ಕಾರ್ಮಿಕರ ಪರವಾಗಿ ಅವರ ಬೇಡಿಕೆಗಳ ಇತ್ಯರ್ಥಕ್ಕಾಗಿ ಸಂಧಾನ ನಡೆಸಲು ಈ ನಾಲ್ಕು ಸಂಘಗಳ ಪೈಕಿ ಯಾವುದೇ ಒಂದು ಸಂಘವು ಶೇಕಡ ಐವತ್ತಕ್ಕಿಂತ ಮಿಗಿಲಾದ ಸದಸ್ಯರ ಬೆಂಬಲವನ್ನು ಗುಪ್ತ ಮತದಾನದಲ್ಲಿ ಪಡೆದರೆ ಆ ಸಂಘವನ್ನು ಮಾನ್ಯ ಮಾಡಲಾಗುತ್ತಿತ್ತು. ಈ ರೀತಿ ಬಹುಸಂಖ್ಯಾತ ಬೆಂಬಲವನ್ನು ಯಾವೊಂದು ಸಂಘವೂ ಪಡೆಯದಿದ್ದಲ್ಲಿ ಅತಿಹೆಚ್ಚು ಬೆಂಬಲ ಪಡೆದ ಪ್ರಥಮ ಮತ್ತು ಎರಡನೆಯ ಸಂಘಗಳನ್ನು ಮಾನ್ಯ ಮಾಡುವ ವ್ಯವಸ್ಥೆಯಿದ್ದಿತು. ಈ ಎಲ್ಲ ನಾಲ್ಕು ಸಂಘಗಳೂ ಅಧ್ಯಕ್ಷರ ಗಾದಿಗೆ `ಹೊರಗಿನ ನಾಯಕರನ್ನು ಆಯ್ಕೆ ಮಾಡುತ್ತಿದ್ದರು. ಕಮ್ಯುನಿಸ್ಟ್ನ ಎರಡು ಸಂಘಗಳಿಗೆ ಕ್ರಮವಾಗಿ ಪ್ರೊಫೆಸರ್ ಬಾಬು ಮ್ಯಾಥ್ಯು (ಇವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದರು) ಮತ್ತು ದಿವಂಗತ ಶ್ರೀ ಸೂರ್ಯನಾರಾಯಣರಾವ್ (ಇವರು ಕರ್ನಾಟಕ ರಾಜ್ಯ ಸಿ.ಪಿ.ಎಂ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು ಹಲವಾರು ಸಂಸ್ಥೆಗಳ ಕಾರ್ಮಿಕ ಸಂಘಗಳ ಪ್ರಭಾವಿ ನಾಯಕರಾಗಿದ್ದು, ವಿಧಾನಸಭಾ ಸದಸ್ಯರೂ ಆಗಿದ್ದರು) ಅಧ್ಯಕ್ಷರಾದರೆ, ಇನ್ನೆರಡು ಸಂಘಗಳಿಗೆ ಕ್ರಮವಾಗಿ ದಿವಂಗತ ಶ್ರೀ ರಮೇಶ್ (ರಾಜ್ಯದ ಮಾಜಿ ಸಚಿವರು) ಹಾಗೂ ಅವರ ನಂತರ ಪ್ರೊ. ಬಿ.ಕೆ. ಚಂದ್ರಶೇಖರ್ (ಇವರು ವಿಧಾನ ಪರಿಷತ್‍ನ ಮಾಜಿ ಅಧ್ಯಕ್ಷರಾಗಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಪ್ರಾಧ್ಯಾಪಕರಾಗಿದ್ದರು) ಮತ್ತು ಆಲಂಪಲ್ಲಿ ವೆಂಕಟರಾಮ್‍ರಂಥ ಧೀಮಂತ ನಾಯಕರು ಅಧ್ಯಕ್ಷರಾಗಿದ್ದರು. ಅನೇಕ ಸಭೆಗಳಲ್ಲಿ, ದ್ವಾರ ಸಭೆಗಳಲ್ಲಿ ಅವರ ಕಾರ್ಯಕರ್ತರನ್ನುದ್ದೇಶಿಸಿ ಈ ನಾಯಕರು ಭಾಷಣ ಮಾಡುತ್ತಿದ್ದು ಅವರ ವಿಸ್ತೃತ ಜ್ಞಾನ, ಅವರ ಧೋರಣೆಗಳು, ಕಾರ್ಮಿಕರ ಮನಮುಟ್ಟಲು ಅವರು ಬಳಸುತ್ತಿದ್ದ ವೈಶಿಷ್ಟ್ಯಪೂರ್ಣ ಶೈಲಿಗಳು, ಕಠಿಣ ವಿಷಯಗಳ ಬಗೆಗಿನ ವಿಶ್ಲೇಷಣೆ, ಅವರ ವಾಕ್ಚಾತುರ್ಯ ಇವು ನನ್ನ ಮೇಲೆ ಗಾಢವಾದ ಪರಿಣಾಮ ಬೀರಿ ಈ ನಾಯಕರ ಸಾಮಥ್ರ್ಯ ಮತ್ತು ಬದ್ಧತೆಗಳ ಬಗ್ಗೆ ಗೌರವಾದಗಳು ಮೂಡುತ್ತಿದ್ದವು. ಇಂದಿನ ಅನೇಕ ಯುವಕರು ಹೊಸದಾಗಿ ಕೈಗಾರಿಕೆಗಳಿಗೆ ಸೇರಿಕೊಂಡು, ಅದರಲ್ಲೂ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಮಿಕ ಸಂಘಗಳೊಂದಿಗೆ ವ್ಯವಹರಿಸುವ ಅವಕಾಶ ಹೊಂದಿದರೂ ಆ ಸವಾಲನ್ನು ಸ್ವೀಕರಿಸುವುದು ವಿರಳವಾಗಿದೆ. ಈಗಿನ ಕಾರ್ಮಿಕ ನಾಯಕರು ಆ ರೀತಿ ಔನ್ನತ್ಯವನ್ನು ಸಾಧಿಸಿಲ್ಲದಿರುವುದೇ ಇದಕ್ಕೆ ಕಾರಣ. ಆದರೆ ಮೇಲೆ ತಿಳಿಸಿದ ಘಟಾನುಘಟಿಗಳೊಂದಿಗೆ ವ್ಯವಹರಿಸುವ, ಅವರ ಆಲೋಚನೆಗಳ ಲಹರಿಗಳನ್ನು ಹತ್ತಿರದಿಂದ ಗಮನಿಸುವ ಅವಕಾಶ ಸಿಕ್ಕಿದುದು ನನ್ನ ಅದೃಷ್ಟವೇ ಸರಿ. ಬಿ.ಇ.ಎಲ್.ನ ನನ್ನ ಅನುಭವದಲ್ಲಿ ಈ ಕೆಳಗಿನ ಘಟನಾವಳಿಗಳು ಅಚ್ಚಳಿಯದೆ ನಿಂತಿದ್ದು, ಅವು ಆ ಕಾರ್ಮಿಕ ಸಂಘಗಳ ಸಾಮರ್ಥ್ಯವನ್ನೂ, ಕಾರ್ಯವೈಖರಿಯನ್ನೂ ಪ್ರತಿಬಿಂಬಿಸುತ್ತವೆ. ಅ) ಕಾರ್ಮಿಕ ಸಂಘಗಳು ಆ ದಿನಗಳಲ್ಲಿಯೇ ತಮ್ಮ ಸದಸ್ಯರ ಬೌದ್ಧಿಕ ಬೆಳವಣಿಗೆಗೆಂದು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದುವು. ಈ ತರಗತಿಗಳಲ್ಲಿ - ಕೈಗಾರಿಕೆಗಳಲ್ಲಿ ಕಾರ್ಮಿಕ ಸಂಘದ ಪಾತ್ರ, ಕಾರ್ಮಿಕ ಸಂಘದ ಸದಸ್ಯನ ಹಕ್ಕುಬಾಧ್ಯತೆಗಳು, ಕೈಗಾರಿಕೆಗಳ ಎದುರಿಗಿದ್ದ ಸಮಸ್ಯೆಗಳು, ಆರ್ಥಿಕ ಬೆಳವಣಿಗೆಗಳು - ಹೀಗೆ ಹಲವಾರು ಉಪಯುಕ್ತ ವಿಷಯಗಳ ಬಗ್ಗೆ ಕಾರ್ಮಿಕ ನಾಯಕರು ತಿಳುವಳಿಕೆ ಮೂಡಿಸುತ್ತಿದ್ದರು. ಆ) ಆಡಳಿತದಲ್ಲಿ ಕಾರ್ಮಿಕ ನಾಯಕರು ಪಾತ್ರ ವಹಿಸಿಕೊಳ್ಳಬೇಕೆಂಬ ಧ್ಯೇಯವನ್ನು ಹೊಂದಿ Workers Participation in Management Scheme ಎಂಬ ಯೋಜನೆಯನ್ನು ನಿರ್ಮಿಸಿ, ಸಂಸ್ಥೆ ಉತ್ತಮವಾಗಿ ನಡೆಯಲು ವಿವಿಧ ಹಂತಗಳಲ್ಲಿ ಕಾರ್ಮಿಕರು ಜವಾಬ್ದಾರಿಯುತವಾಗಿ ಆಡಳಿತ ವರ್ಗದೊಂದಿಗೆ ಸೇರಿ ಜೊತೆಯಾಗಿ ಕಾರ್ಯ ನಿರ್ವಹಿಸಬೇಕೆಂದು ನಿರ್ಧರಿಸಿ, ಅದರಂತೆ ಸಣ್ಣ ಶಾಖೆಗಳ ಹಂತದಲ್ಲಿ, ಮಧ್ಯಮ ಮಟ್ಟವಾದ ವಿಭಾಗದ ಹಂತದಲ್ಲಿ ಹಾಗೂ ಅತಿ ಜವಾಬ್ದಾರಿ ಹೊಂದಿದ ಮೇಲ್ವರ್ಗದ ಘಟಕದ ಮಟ್ಟದಲ್ಲಿ ಎರಡೂ ಪಕ್ಷಗಳ ಕಡೆಯಿಂದ ಸದಸ್ಯರನ್ನು ನೇಮಿಸಿ ಆಯಾ ಮಟ್ಟಗಳಲ್ಲಿ ಸಂಸ್ಥೆ ಉತ್ಕೃಷ್ಟತೆ ಸಾಧಿಸಲು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕೆಂದು ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಈ ರೀತಿಯ ಹಲವಾರು ಸಭೆಗಳಲ್ಲಿ ಭಾಗವಹಿಸಿದ ನಾನು ಉತ್ಪಾದನೆ, ಗುಣಮಟ್ಟ, ನಿರ್ವಹಣೆ ಮುಂತಾದ ಮುಖ್ಯ ವಿಷಯಗಳ ಬಗೆಗಿನ ಚರ್ಚೆಗಳಲ್ಲಿ ಪಾಲ್ಗೊಂಡಿದ್ದೆನು. ವಿವಿಧ ದ್ವಿಪಕ್ಷೀಯ ಸಮಿತಿಗಳಾದ ವರ್ಕ್ಸ್ ಕಮಿಟಿ, ಕ್ಯಾಂಟೀನ್ ಮ್ಯಾನೇಜಿಂಗ್ ಕಮಿಟಿ, ಲೇಬರ್ ವೆಲ್‍ಫೇರ್ ಫಂಡ್, ಕ್ರೀಡಾ ಸಮಿತಿ, ಸುರಕ್ಷತಾ ಸಮಿತಿ - ಇವುಗಳ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿ, ಅನುಭವ ಪಡೆದಿದ್ದೆನು. ಇ) ಮಹಿಳಾ ಮೀಸಲಾತಿಗಾಗಿ ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಬೊಬ್ಬೆಯಿಡುತ್ತಿದ್ದರೂ ಇದುವರೆಗೂ ಯಾವ ಪ್ರಗತಿಯನ್ನೂ ಸಾಧಿಸದಿರುವುದು ಒಂದು ವಿಪರ್ಯಾಸವೇ ಸರಿ. ಮೂವತ್ತು ನಲವತ್ತು ವರ್ಷಗಳಿಗಿಂತ ಮೊದಲಿನಿಂದಲೂ ಅಧಿಕ ಸಂಖ್ಯೆಯ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದ ಹೆಗ್ಗಳಿಕೆ ಬಿ.ಇ.ಎಲ್. ನಂಥ ಸಂಸ್ಥೆಯದು. ಸಾವಿರಾರು ಮಹಿಳೆಯರು ಕಾರ್ಮಿಕ ಸಂಘಗಳ ಸದಸ್ಯರಾಗಿದ್ದು ತಮ್ಮ ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿದ್ದರು. ಒಂದು ಕಾರ್ಮಿಕ ಸಂಘದ ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆಯರನ್ನೊಳಗೊಂಡ ತಂಡವೊಂದನ್ನು ಬಿ.ಇ.ಎಲ್.ನ ವಿವಿಧ ಘಟಕಗಳ ದರ್ಶನಕ್ಕಾಗಿ ಅದೇ ಸಂಘದ ಪದಾಧಿಕಾರಿಯೊಂದಿಗೆ ಸುಮಾರು 12 ದಿವಸಗಳ ಉತ್ತರ ಭಾರತೀಯ ಪ್ರವಾಸಕ್ಕೆ ಕರೆದೊಯ್ದ ಅನುಭವವೂ ನನ್ನದಾಗಿತ್ತು. ಬಹುಸಂಖ್ಯಾತ ಮಹಿಳೆಯರ ತಂಡದ ಜವಾಬ್ದಾರಿ ಹೊತ್ತ ನನ್ನ ಪಾಡು ಹೇಳತೀರದಾಗಿತ್ತು ! ಕಾರ್ಖಾನೆಗಳ ಸಂದರ್ಶನದ ಜೊತೆಗೆ ವಿವಿಧ ಪ್ರದೇಶಗಳ ಸಂದರ್ಶನ, ಸೀರೆಗಳು ಮತ್ತು ಇತರ ವಸ್ತುಗಳ ಖರೀದಿಗೆಂದು ಮಾರಾಟ ಮಳಿಗೆಗಳಲ್ಲಿ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಅವರನ್ನು ಹೊರಡಿಸಿಕೊಂಡು ಬರುವುದೇ ಒಂದು ಸಾಹಸವಾಗಿತ್ತು ! ಈ) ಕೇಂದ್ರೀಯ ಸಂಘಟನೆಗಳ ಭಾಗವಾಗಿದ್ದುದರಿಂದ ಕೇಂದ್ರ ಮಟ್ಟದಲ್ಲಿ ಯಾವುದೇ ಮುಷ್ಕರ, ಬಂದ್ಗಳಿಗೆ ಕರೆ ನೀಡಿದರೆ ಈ ಸಂಘಗಳೂ ಅವುಗಳಲ್ಲಿ ಭಾಗವಹಿಸುತ್ತಿದ್ದುವು. ಆ ರೀತಿ ನಡೆಸಲಾಗುತ್ತಿದ್ದ ಮುಷ್ಕರದ ಸಂದರ್ಭಗಳಲ್ಲಿ ಕೆಲಸ ಸ್ಥಗಿತಗೊಳ್ಳುತ್ತಿತ್ತು ಹಾಗೂ ಯಾವ ಉದ್ಯೋಗಿಯನ್ನೂ (ಆಡಳಿತ ವರ್ಗದವರನ್ನೊಳಗೊಂಡಂತೆ) ಕಾರ್ಖಾನೆಯೊಳಗೆ ಪ್ರವೇಶಿಸಲು ಕಾರ್ಮಿಕ ಸಂಘಗಳು ಬಿಡುತ್ತಿರಲಿಲ್ಲ. ಆದರೆ ಸಿಬ್ಬಂದಿ / ರಕ್ಷಣಾ ಇಲಾಖೆಯ ಹಾಗೂ ಉಪಹಾರಗೃಹದ ಕೆಲವು ಮುಖ್ಯ ಸಿಬ್ಬಂದಿ / ಅಧಿಕಾರಿಗಳನ್ನು ಮಾತ್ರ ಒಳಬಿಡಲು ಕಾರ್ಮಿಕ ಸಂಘದೊಂದಿಗೆ ಸಂಧಾನ ನಡೆಸಿ ಪ್ರವೇಶ ಗಿಟ್ಟಿಸುತ್ತಿದ್ದೆವು. ಮುಷ್ಕರದ ದಿನಗಳಂದು ನಾವೆಲ್ಲರೂ ಬೆಳಗಿನ ಪಾಳಿ ಮೊದಲಾಗುವ ಮುನ್ನ, ಅಂದರೆ ಬೆಳಗಿನ ಜಾವ ನಾಲ್ಕು ಗಂಟೆಯ ಹೊತ್ತಿಗೇ ಒಂದು ವಾಹನದಲ್ಲಿ ಕಾರ್ಖಾನೆಯ ಒಳಹೊಕ್ಕುತ್ತಿದ್ದೆವು. ಮುಷ್ಕರದ ದಿನದ ಹಾಜರಾತಿಯ ಬಗ್ಗೆ ನಮ್ಮ ಕೇಂದ್ರ ಕಛೇರಿಗೆ, ಆ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸುವುದು ನಮ್ಮ ಮುಖ್ಯ ಕೆಲಸಗಳಲ್ಲೊಂದಾಗಿತ್ತು. ಉ) ಒಮ್ಮೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಗಳು ಊಟವನ್ನು ಬಹಿಷ್ಕರಿಸುವ ಕಠಿಣ ನಿರ್ಧಾರ ತೆಗೆದುಕೊಂಡರು. ಅಧಿಕಾರಿ ವರ್ಗ ಎಂದಿನಂತೆ ಊಟ ಮಾಡುವುದು ಎಂದಾದರೂ ಬೇರೆ ಬೇರೆ ವಿಭಾಗಗಳಿಗೆ ಸೇರಿದ ನೂರಾರು ಅಧಿಕಾರಿಗಳು ಕಾರ್ಖಾನೆಯೊಳಗೆ ಊಟ ಮಾಡದೆ ಹೊರಗೆ ತಮ್ಮದೇ ಆದ ಬೇರೆ ವ್ಯವಸ್ಥೆಗಳನ್ನು ಮಾಡಿಕೊಂಡರು. ಇದು ಮಾರನೇ ದಿನ ಅವರ ವಿಭಾಗದ ಕಾರ್ಮಿಕರಿಂದ ಇರುಸು-ಮುರುಸು ಪ್ರಶ್ನೆಗಳಿಂದ ನುಣುಚಿಕೊಳ್ಳುವ ತಂತ್ರವಾಗಿದ್ದಿತು. ಆದರೆ ಸಿಬ್ಬಂದಿ ವರ್ಗದ ಜವಾಬ್ದಾರಿ ಹೊತ್ತ ನಾವುಗಳು ಸುಮಾರು 15-20 ಅಧಿಕಾರಿಗಳು (ಕಾರ್ಮಿಕ ಸಂಘದ ಕರೆಗೆ ಬದ್ಧರಾಗಕೂಡದೆಂದು) ನಮ್ಮ ಹಿರಿಯ ನಾಯಕರೊಂದಿಗೆ ಕ್ಯಾಂಟೀನ್‍ನಲ್ಲಿಯೇ ಊಟ ಮಾಡುವುದೆಂದು ನಿರ್ಧರಿಸಿ, ಊಟಕ್ಕೆ ಹೊರಟೆವು. ನಮ್ಮ ಚಲನವಲನಗಳನ್ನೇ ಗಮನಿಸುತ್ತಿದ್ದ ಕಾರ್ಮಿಕ ನಾಯಕರು ತಕ್ಷಣ ಕ್ಯಾಂಟೀನ್‍ಗೆ ಬಂದು ನಾವು ಊಟ ಮಾಡುತ್ತಿದ್ದ ಟೇಬಲ್ ಸುತ್ತ ನೆರೆದು ನಮ್ಮ ರಕ್ತವನ್ನೇ ಊಟ ಮಾಡಲು ನಿಮಗೆ ಹೇಗಾದರೂ ಮನಸ್ಸು ಬಂದಿತು, ಅನುಕಂಪವೇ ಇಲ್ಲದ ನಿಮಗೆ ಧಿಕ್ಕಾರ - ಹೀಗೆ ನಾನಾ ವಿಧವಾದ ಘೋಷಣೆಗಳನ್ನು ಕೂಗುತ್ತಲಿರುವಾಗಲೇ ನಾವು ಮೌನವಾಗಿ ಊಟ ಮಾಡಿದ ಆ ಸನ್ನಿವೇಶ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಊ) ಇಷ್ಟಾದರೂ ಆಡಳಿತವರ್ಗ ಮತ್ತು ಕಾರ್ಮಿಕ ಸಂಘಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಪರಸ್ಪರ ಇನ್ನೊಬ್ಬರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಉದಾಹರಣೆಗೆ, ಶಿಸ್ತಿನ ವಿಚಾರದಲ್ಲಿ ಸಂಸ್ಥೆಯು ಸಂಸ್ಥೆಯ ಸ್ಥಾಯಿ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳುವಾಗ ಕಾರ್ಮಿಕ ಸಂಘಕ್ಕೆ ಕೇವಲ ಮಾಹಿತಿಗಾಗಿ ವಿಷಯ ತಿಳಿಸುತ್ತಿತ್ತು. ಆದರೆ ಸಂಘಗಳನ್ನು ಕೇಳಿ ಅವರು ಸರಿಯೆಂದು ಹೇಳುವವರೆಗೆ ಕಾಯಬೇಕಾದ ಅಗತ್ಯವಿರಲಿಲ್ಲ. ಆದರೆ ಕಾರ್ಮಿಕರ ಬೆಂಬಲಕ್ಕೆಂದು ಸಂಘ ಶಿಸ್ತುಕ್ರಮದ ಅಂಗವಾಗಿ ನಡೆಸುತ್ತಿದ್ದ ಆಂತರಿಕ ವಿಚಾರಣೆಯ ಸಂದರ್ಭದಲ್ಲಿ, ವಜಾ ಆದ ನಂತರ ಕೋರ್ಟಿನಲ್ಲಿ ಕೇಸನ್ನು ನಡೆಸುವ ಸಂದರ್ಭದಲ್ಲಿ ನೆರವಾಗುತ್ತಿತ್ತು. ಋ) ಹಿಂದೆ ಹೇಳಿದಂತೆ ಯಾವೊಂದು ಸಂಘವೂ ಬಹುಸಂಖ್ಯಾತ ಬೆಂಬಲ ಪಡೆಯದ ಪಕ್ಷದಲ್ಲಿ ಎರಡು ಸಂಘಗಳನ್ನು ಮಾನ್ಯ ಮಾಡುವ ಪದ್ಧತಿಯಿದ್ದಿತು. ಎರಡೂ ತಂಡಗಳು ಬೇರೆ ಬೇರೆ ಸಿದ್ಧಾಂತಗಳಿಗೊಳಪಟ್ಟಿದ್ದರೂ, ಅವರ ದೃಷ್ಟಿಕೋನಗಳು ಬೇರೆಬೇರೆಯಾಗಿದ್ದರೂ, ಸಂಸ್ಥೆಯ ದೃಷ್ಟಿಯಿಂದ, ಕಾರ್ಮಿಕರ ಏಳ್ಗೆಗಾಗಿ ಒಟ್ಟುಗೂಡಿ ಸಂಧಾನ ನಡೆಸಿ ತಮ್ಮ ಗುರಿಗಳನ್ನು ಸಾಧಿಸುತ್ತಿದ್ದ ಬಗೆ ನಿಜಕ್ಕೂ ಶ್ಲಾಘನೀಯವಾದುದು. ಋೂ) ಬಿ.ಇ.ಎಲ್.ನ ಆಂತರಿಕ ಕಾರ್ಮಿಕ ಸಂಘಗಳ ನಾಯಕರುಗಳಲ್ಲಿ ಬಿಇಇಯು ನ ಶ್ರೀ ಎಂ.ಎಸ್. ಕೃಷ್ಣನ್ (ಮಾಜಿ ವಿಧಾನಸಭೆ ಸದಸ್ಯರು) ಮತ್ತು ಶ್ರೀ ಸುರೇಂದ್ರನಾಥ್ ಅತ್ಯಂತ ಅನುಭವಿ ಮತ್ತು ಆದರ್ಶಪ್ರಾಯ ನಾಯಕರಾಗಿದ್ದು ಕಾರ್ಮಿಕ ಸಂಘವನ್ನು ಹೇಗೆ ನಡೆಸಬೇಕು, ಕಾರ್ಮಿಕ ನಾಯಕರು ಹೇಗೆ ಬದ್ಧತೆಯುಳ್ಳವರಾಗಿರಬೇಕೆಂಬುದನ್ನು ಮುಂದಿನ ಪೀಳಿಗೆಗೆ ತೋರಿಸಿಕೊಟ್ಟವರು. ಅವರೊಡನೆ ನೇರವಾಗಿ ವ್ಯವಹರಿಸುವ ಅವಕಾಶ ನನಗಿರಲಿಲ್ಲ. ಅವರ ನಂತರ ಬಂದ ಅವರ ಸಹೋದ್ಯೋಗಿಗಳಾದ ವೇಲಾಯುಧಂ, ದೀಪಕ್, ಗೋಪಾಲರೆಡ್ಡಿ ಹಾಗೂ ಮುನಿರೆಡ್ಡಿ ಬಿ.ಎಂ.ಎಸ್.ನ ಸೋಮಣ್ಣ, ಬಿ.ಇ.ಡಬ್ಲ್ಯು.ಯು.ನ ವಿಭೂತಿಮಠ ಹಾಗೂ ಬಿ.ಇ.ಡಬ್ಲ್ಯು.ಯು.ಎಫ್.ನ ಬಾಳಪ್ಪ ಸಿ.ವಿ.ಎಸ್. ರೆಡ್ಡಿ ಹಾಗೂ ಕೃಷ್ಣಪ್ಪ ಇವರುಗಳೊಡನೆ ಉದ್ಯೋಗಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿ ಜಂಟಿಯಾಗಿ ನಿರ್ಧಾರಗಳನ್ನು ತೆಗೆದುಕೊಂಡು ಆಡಳಿತ ವರ್ಗದ ಕಿರಿಯ ಸದಸ್ಯನಾಗಿ ಅತ್ಯಂತ ಉಪಯುಕ್ತ ಅನುಭವ ಪಡೆದೆನು. 2) ಮುಂದೆ ಮೈಕೊ ನಾಗನಾಥಪುರ ಘಟಕವನ್ನು ಸೇರಿದಾಗ ಕಾರ್ಮಿಕ ಸಂಘದ ಕಾರ್ಯವೈಖರಿಯಲ್ಲಿ ಬದಲಾವಣೆಯಾಯಿತು. ಒಂದೇ ಕಾರ್ಮಿಕ ಸಂಘವಿದ್ದರೂ (ಮೈಕೊ ಕಾರ್ಮಿಕರ ಸಂಘ) ಎರಡು ವಿಭಿನ್ನ ಕಾರ್ಮಿಕರ ಗುಂಪುಗಳು ಅಸ್ತಿತ್ವದಲ್ಲಿದ್ದವು. ಒಂದು ಗುಂಪು ಸಿಐಟಿಯುನ ಸಿದ್ಧಾಂತಗಳಿಗೆ ಬದ್ಧವಾಗಿದ್ದರೆ ಮತ್ತೊಂದು ಗುಂಪು ಐಎನ್‍ಟಿಯುಸಿದ ತತ್ವಗಳಿಗೆ ಶರಣಾಗಿದ್ದಿತು. ಮೊದಲನೇ ಗುಂಪಿಗೆ ಶ್ರೀ ಸೂರ್ಯನಾರಾಯಣರಾವ್ ಅಧ್ಯಕ್ಷರಾಗಿದ್ದು ಎರಡನೇ ಗುಂಪಿನ ಅಧ್ಯಕ್ಷರಾಗಿ ಶ್ರೀ ಶಿವಲಿಂಗಯ್ಯ (ಎಚ್.ಎಂ.ಟಿ. ಸಂಸ್ಥೆಯ ಕಾರ್ಮಿಕ ನಾಯಕರಾಗಿದ್ದವರು) ಇದ್ದರು. ವಿಶೇಷ ಸಂಗತಿಯೆಂದರೆ ಎರಡೂ ಗುಂಪುಗಳೂ ಸೇ. 50ರ ಆಸುಪಾಸಿನಲ್ಲೇ ಉದ್ಯೋಗಿಗಳ ಬೆಂಬಲವನ್ನು ಹೊಂದಿದ್ದವು. ಇದರಿಂದಾಗಿ ಯಾರೇ ಚುನಾವಣೆಯಲ್ಲಿ ಆರಿಸಿಬಂದು ಸಂಧಾನ ಮಾಡುವ ಅವಕಾಶ ಪಡೆಯುತ್ತಿದ್ದರೂ, ಅತ್ಯಂತ ಬಲಿಷ್ಟ ವಿರೋಧಿ ಬಣದ ಎಚ್ಚರದ ಕಣ್ಣುಗಳೆದುರಲ್ಲೇ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿಯಿದ್ದಿತು. ನನ್ನ ಅನುಭವದಲ್ಲಿ ಬಹುಪಾಲು ಕೇರಳ ಮತ್ತು ತಮಿಳುನಾಡುಗಳಲ್ಲಿರುವಂತೆ ಆಡಳಿತ ಪಕ್ಷ / ವಿಒರೋಧ ಪಕ್ಷಗಳಾಗಿ ಜವಾಬ್ದಾರಿಗಳನ್ನು ಹೊತ್ತು ಎರಡು ಪ್ರಮುಖ ಪಕ್ಷಗಳೂ ಕ್ರಮವಾಗಿ ಒಂದರ ನಂತರ ಒಂದರಂತೆ ಆಡಳಿತ / ವಿರೋಧಿ ಪಕ್ಷಗಳಾಗಿ ಚುನಾವಣೆಗೊಳ್ಳುವಂತೆ ಈ ಎರಡೂ ಸಂಘಗಳು ಎರಡು ವರ್ಷಗಳಿಗೊಮ್ಮೆ ತಮ್ಮ ತಮ್ಮ ಸ್ಥಾನಗಳನ್ನು ಕಾರ್ಮಿಕರ ಆಶಯದಂತೆ ಬದಲಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದವು. ಉದ್ಯೋಗಿಗಳ ಸರಾಸರಿ ವಯೋಮಾನ ಸುಮಾರು 30 ರಷ್ಟಿದ್ದುದರಿಂದ ಅವರ ಆಶೋತ್ತರಗಳನ್ನು ಪೂರೈಸುವುದು ಕಾರ್ಮಿಕ ಸಂಘಗಳಿಗೆ ಕಷ್ಟಸಾಧ್ಯವಾಗಿದ್ದಿತು. ಅದೂ ಅಲ್ಲದೆ ನಾಗನಾಥಪುರದ ಘಟಕದಲ್ಲಿ ತಯಾರಾಗುತ್ತಿದ್ದ ಉತ್ಪನ್ನಗಳು ಲಾಭದಾಯಕ ಸ್ಥಿತಿಯಲ್ಲಿಲ್ಲದಿದ್ದುದರಿಂದ ಒತ್ತಡದ ಪರಿಸ್ಥಿತಿಯಿದ್ದಿತು. ಮೈಕೊ, ಬಾಷ್ ಮಹಾಸಂಸ್ಥೆಯ ಅಂಗಸಂಸ್ಥೆಯಾಗಿದ್ದುದರಿಂದ ಇಲ್ಲಿಯ ಉತ್ಪನ್ನಗಳು ಲಾಭದಾಯಕತೆಯನ್ನು ಹೊಂದಬೇಕಾಗಿದ್ದು ಬಾಷ್ನ ಬೇರೆ ಬೇರೆ ದೇಶಗಳ ಇತರ ಘಟಕಗಳೊಂದಿಗೆ ಸ್ಪರ್ಧಾತ್ಮಕವಾಗಿ ಸೆಣಸಾಡಬೇಕಾದ ಕಠಿಣ ಪರಿಸ್ಥಿತಿಯಿದ್ದಿತು. ಸಂಸ್ಥೆಯ ಇತರ ಘಟಕಗಳೊಂದಿಗಲ್ಲದೆ ಭಾರತದ ಇನ್ನಿತರ ಹಲವಾರು ಆಟೊ ಕಾಂಪೊನೆಂಟ್ಸ್ ತಯಾರಿಕಾ ಸಂಸ್ಥೆಗಳೊಂದಿಗೂ ಸಹ ಸ್ಪರ್ಧೆಯಲ್ಲಿ ಜಯಿಸಬೇಕಾಗಿತ್ತು. ಘಟಕವು ಯಶಸ್ವಿಯಾಗಬೇಕಾದರೆ ಉತ್ಪನ್ನಗಳ ತಯಾರಿಕಾ ವೆಚ್ಚವನ್ನು ಕಡಿತಗೊಳಿಸುವುದಲ್ಲದೆ, ಗುಣಮಟ್ಟದ ಹೆಚ್ಚಳ, ಗ್ರಾಹಕರನ್ನು ಸಂತುಷ್ಟಗೊಳಿಸಲು ಅವರು ಹಾಕಿದ ನಿಬಂಧನೆಗಳ ಪ್ರಕಾರ ಎಲ್ಲ ಉತ್ಪಾದನಾ ಹಾಗೂ ಸೇವಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು, ಅಗತ್ಯವಿದ್ದಷ್ಟು ಜನರ ಬಳಕೆ ಹೀಗೆ ಹಲವು ರೀತಿಗಳಲ್ಲಿ ಘಟಕದ ಪ್ರದರ್ಶನವನ್ನು ಸುಧಾರಿಸಲು ಶ್ರಮವಹಿಸಿ ದುಡಿಯಬೇಕಾಗಿತ್ತು. ಮೈಕೊದ ಸೇವಾವಧಿಯಲ್ಲಿದ್ದಾಗ ಸಿಐಟಿಯು ಹಾಗೂ ಐಎನ್‍ಟಿಯುಸಿ ಎರಡೂ ಗುಂಪುಗಳೊಡನೆ ತೀವ್ರ ಮಟ್ಟದ ಚೌಕಾಶಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದೆನು. ಸಂಧಾನ ಮಾತುಕತೆಗಳ ಅವಧಿಯಲ್ಲಿ ನನ್ನ ಅರಿವಿಗೆ ಬಂದ, ಬೌದ್ಧಿಕ ನೆಲೆಯಲ್ಲಿ ಕಂಡುಕೊಂಡ ಗಮನಾರ್ಹ ಅಂಶಗಳೆಂದರೆ : ಅ) ಎರಡೂ ತಂಡಗಳೂ (ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘ) ಸಭೆಗೆ ಬರುವ ಮುನ್ನ ಚರ್ಚಿಸುವ ವಿಷಯಗಳ ಬಗ್ಗೆ ಸುದೀರ್ಘವಾದ ಮಾಹಿತಿಗಳೊಂದಿಗೆ ನಡೆಸುತ್ತಿದ್ದ ಪೂರ್ವ ತಯಾರಿಕೆ. ಆ) ತಾವು ಎತ್ತಿಕೊಳ್ಳಬೇಕಾಗಿದ್ದ ವಿಷಯಗಳ ಸಮರ್ಥನೆಗಾಗಿ ಈರ್ವರೂ ಮಂಡಿಸಲಾಗುತ್ತಿದ್ದ ಶಕ್ತಿಯುತ ವಾದಗಳು. ಇ) ಯಾವುದೇ ನಿರ್ಧಾರವನ್ನು ಅಂತಿಮಗೊಳಿಸುವ ಮುನ್ನ ಅದರ ಸಾಧಕ-ಬಾಧಕಗಳು, ಆ ನಿರ್ಧಾರಗಳುಂಟು ಮಾಡುವ ಪರಿಣಾಮಗಳು, ಅದನ್ನು ರಾಜಕೀಯವಾಗಿ ಯಾವ ರೀತಿ ಮಾರಾಟ ಮಾಡಬೇಕೆಂಬ ತಂತ್ರಗಾರಿಕೆಯನ್ನು ರೂಪಿಸಿಕೊಂಡು ವಿರೋಧಿ ಆಕ್ರಮಣವನ್ನು ಎದುರಿಸಲು ಕಾರ್ಮಿಕ ಸಂಘ ನಡೆಸುತ್ತಿದ್ದ ಸಿದ್ಧತೆಗಳು. ಈ) ಸಭೆಯಲ್ಲಿ ತೆಗೆದುಕೊಂಡ ಮುಖ್ಯ ನಿರ್ಣಯಗಳನ್ನು ಜನರಿಗೆ ಯಾವ ಸಂದರ್ಭದಲ್ಲಿ ಸೂಕ್ತವಾಗಿ, ಯಾವ ರೀತಿ ಮುಟ್ಟಿಸಬೇಕೆಂಬ ಯೋಜನೆ. ಉ) ಈ ಸಭೆಗಳಲ್ಲಿ ಹೊರಗಿನ ನಾಯಕರು ಮತ್ತು ಸಂಸ್ಥೆಯ ಆಂತರಿಕ ನಾಯಕರ ನಡುವೆ ಬೌದ್ಧಿಕವಾಗಿ ಮತ್ತು ತಾತ್ವಿಕವಾಗಿ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳೇರ್ಪಟ್ಟರೂ ಅದನ್ನು ಆರೋಗ್ಯಕರ ಮಾತು ಕತೆಯ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು. ಎರಡೂ ನಾಯಕರ ಅಭಿಪ್ರಾಯಗಳು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿದಾಗ ಸರಿಯೆನಿಸುತ್ತಿತ್ತು. ಹೊರಗಿನ ನಾಯಕರು ಬೇರೆ ಬೇರೆ ಸಂಸ್ಥೆಗಳಲ್ಲಿ ಪಡೆದ ಅನುಭವದ ಹಿನ್ನೆಲೆಯಲ್ಲಿ ಮತ್ತು ಇಡೀ ಅರ್ಥವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯವಾಗಿ ತಮ್ಮ ಗುಂಪಿನ ಒಳಿತಿನ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರೆ ಸ್ಥಳೀಯ ನಾಯಕರು ಕಾರ್ಖಾನೆಯಲ್ಲಿ ತಮ್ಮ ಬೆಂಬಲಿಗರು ಮತ್ತು ವಿರೋಧಿ ಸದಸ್ಯರು ಈ ನಿರ್ಧಾರಗಳನ್ನು ಹೇಗೆ ಸ್ವೀಕರಿಸುವರು, ಇದರಿಂದ ತಮಗೆ ಹೇಗೆ ಲಾಭವಾಗುವುದೆಂಬುದನ್ನು ಎಣಿಸಿ ನಿರ್ಧಾರಗಳಿಗೆ ತಮ್ಮ ಒಲವು ಸೂಚಿಸುತ್ತಿದ್ದರು. ಊ) ಎರಡೂ ಕಡೆ (ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘ) ಮಾತುಕತೆಗಳಲ್ಲಿ ಮೇಲುಗೈ ಸಾಧಿಸಲು ಹವಣಿಕೆ, ತೀವ್ರ ಪೈಪೋಟಿಯಿರುತ್ತಿದ್ದಿತು. ಇದಕ್ಕೆ ಕಾರಣ, ಅತ್ಯಂತ ಕ್ಲಿಷ್ಟಕರ ವಿಷಯಗಳನ್ನು ನಿರ್ಣಯಿಸಬೇಕಾದ ಹೊಣೆಗಾರಿಕೆಯಿದ್ದಿತು. ಆಡಳಿತ ವರ್ಗದ ಕಡೆಯಿಂದ ಉತ್ಪನ್ನಗಳ ಬೆಲೆ ಕಡಿತಗೊಳಿಸಲು ಅನೇಕ ಪ್ರಸ್ತಾವನೆಗಳನ್ನು-ಕೆಲವು ಉತ್ಪನ್ನಗಳ ತಯಾರಿಕಾ ವೆಚ್ಚವನ್ನು ಕಡಿತಗೊಳಿಸುವ ಕ್ರಮವಾಗಿ ಅವುಗಳ ಉತ್ಪಾದನೆಯನ್ನು ಕಾರ್ಖಾನೆಯ ಹೊರಗಿನಿಂದ, ಬೇರೆ ಉತ್ಪಾದನಾ ಘಟಕಗಳಿಂದ ಕಡಿಮೆ ವೆಚ್ಚದಲ್ಲಿ ತರಿಸಿಕೊಳ್ಳುವುದು, ಮುಂತಾದುವನ್ನು ಮುಂದಿಡಲಾಗುತ್ತಿತ್ತು. (ancillarisation or outsourcing) ಕಾರ್ಮಿಕ ಸಂಘವು ಇದಕ್ಕೆ ಪ್ರತಿಯಾಗಿ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸುವುದು, ಹಿರಿಯ ಉದ್ಯೋಗಿಗಳಿಗೆ ಭಡ್ತಿ ಯೋಜನೆಯ ಜಾರಿ ಇಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಧಾನಕ್ಕೆ ಬರುತ್ತಿದ್ದುವು. ಋ) ಒಟ್ಟು ಸಂಧಾನದ ಪ್ರಕ್ರಿಯೆಯು ಗಂಟೆಗಟ್ಟಲೆ ನಡೆಯುತ್ತಿದ್ದಿತು. ಹತ್ತು ಹಲವು ಸಂದರ್ಭಗಳಲ್ಲಿ ಮಾತುಕತೆಗಳು ಸಂಜೆಯಿಡೀ ನಡೆದು ಮಧ್ಯರಾತ್ರಿ ಕಳೆದು ಬೆಳಗಿನ ಜಾವದವರೆಗೂ ನಡೆದಿರುವ ಪ್ರಸಂಗಗಳು ಇಲ್ಲದಿಲ್ಲ. ಆಡಳಿತವರ್ಗದ ಕಡೆ ಘಟಕದ ಮುಖ್ಯಸ್ಥರಾದ ಉತ್ಪಾದನಾ ಮತ್ತು ವಾಣಿಜ್ಯ ವಿಭಾಗಗಳ ಪ್ರಮುಖರು ಮಾತುಕತೆಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದು ಅವರೊಡನೆ ಸಿಬ್ಬಂದಿ ವಿಭಾಗದ ಮುಖ್ಯಸ್ಥರಾದ ಶ್ರೀ ಬ್ರಿಟ್ಟೊ ಮತ್ತು ನಾನು ಭಾಗವಹಿಸುತ್ತಿದ್ದೆವು. ಎಷ್ಟೋ ದಿನ ಊಟ ತಿಂಡಿಗಳನ್ನು ಸೇವಿಸದೆ ಕಾಫಿ, ಟೀ, ಬಿಸ್ಕತ್ತುಗಳನ್ನು ಸೇವಿಸಿಕೊಂಡೇ ಕಾಲ ಕಳೆಯುತ್ತಿದ್ದೆವು ! ಋೂ) ಇಷ್ಟೆಲ್ಲ ತೀವ್ರ ಒತ್ತಡಭರಿತ ವಾತಾವರಣದಲ್ಲಿ ಚರ್ಚೆಗಳು ಮುಂದುವರೆಯುತ್ತಿದ್ದರೂ ನಾನು ಸಂಧಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಕಲಿತ ಅತ್ಯಂತ ಪ್ರಮುಖ ಅಂಶವೆಂದರೆ : ಅಧಿಕೃತ ಮಾತುಕತೆಗಳಲ್ಲಿ ಸಕಾರಾತ್ಮಕ ಫಲಿತಾಂಶ ಬರುವುದು ಕಷ್ಟಸಾಧ್ಯವಾಗಿದ್ದರೂ ಬಹುತೇಕ ಪರಸ್ಪರ ಅನಧಿಕೃತ, ಸಭೆಗಳಿಂದಾಚೆಗೆ ನಡೆಸುತ್ತಿದ್ದ ವಿಚಾರ ವಿನಿಮಯ, ಎರಡೂ ಕಡೆಗಳ ಇತುಇ-ಮಿತಿಗಳು, ಒಳಮನಸ್ಸಿನ ಇಂಗಿತಗಳು, ನಂಬಿಕೆ ಬೆಳೆಸುವ ಇತರ ಕ್ರಮಗಳ ಬಗೆಗಿನ ಚರ್ಚೆಗಳು-ಇವುಗಳಿಂದಾಗಿ ವಿಷಯಗಳ ಇತ್ಯರ್ಥವಾಗುತ್ತಿದ್ದುವು. ಈ ಅನೌಪಚಾರಿಕ ಮಾತುಕತೆಗಳಲ್ಲಿ ಅಧಿಕೃತ ಸಭೆಗಳಲ್ಲಿರುತ್ತಿದ್ದ ಬಿಗಿತನ, ಸಿದ್ಧಾಂತಕ್ಕೆ ತಕ್ಕಂತೆ ಅಂಟಿಕೊಳ್ಳುತ್ತಿದ್ದ ಧೋರಣೆಗಳು, ಇವುಗಳನ್ನು ಕಳಚಿ ವೈಯಕ್ತಿಕ ನೆಲೆಯಲ್ಲಿ ಒಬ್ಬರನ್ನೊಬ್ಬರು ಅರಿತು ಸಮಸ್ಯೆ ಬಗೆಹರಿಸಲು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿತ್ತು. ಎ) ಹಿಂದೆ ಪ್ರಸ್ತಾಪಿಸಿದಂತೆ ಎರಡೂ ಕಾರ್ಮಿಕ ಬಣಗಳ ನಡುವೆ ತೀವ್ರ ಪೈಪೋಟಿಯೇರ್ಪಟ್ಟಿದ್ದುದರಿಂದ ಎರಡು ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದ ಚುನಾವಣೆಗಳು ತೀವ್ರ ಕುತೂಹಲ ಕೆರಳಿಸುತ್ತಿತ್ತು. ಉದ್ಯೋಗಿಗಳ ಶೈಕ್ಷಣಿಕ ಮಟ್ಟ ಉತ್ತಮವಾಗಿದ್ದುದರಿಂದ (ಕಾರ್ಖಾನೆಗೆ ಸೇರಲು ಕನಿಷ್ಟ ಐಟಿಐ ಕೋರ್ಸನ್ನು ಪೂರೈಸಬೇಕಿದ್ದು, ಹಲವು ಉದ್ಯೋಗಿಗಳು ಮೈಕೊ ಸಂಸ್ಥೆಯಿಂದಲೇ ನೀಡಲಾಗುತ್ತಿದ್ದ ಅಪ್ರೆಂಟಿಸ್‍ಶಿಪ್ ಶಿಕ್ಷಣವನ್ನು ಪಡೆದಿದ್ದು ಅತ್ಯಂತ ಬುದ್ಧಿಶಾಲಿಗಳಾಗಿದ್ದರು) ಚಾಣಾಕ್ಷತನದಿಂದ ತಮ್ಮ ಪ್ರತಿನಿಧಿಗಳನ್ನು ಆರಿಸುತ್ತಿದ್ದರು. ಕಾರ್ಮಿಕ ಸಂಘಕ್ಕಲ್ಲದೆ ಕ್ಯಾಂಟೀನ್ ಆಡಳಿತ ಸಮಿತಿಗೂ ಚುನಾವಣೆ ನಡೆಯುತ್ತಿದ್ದು ಈ ಸಮಿತಿಗೆ ಬಹುತೇಕ ವಿರೋಧಿ ಸದಸ್ಯರೇ ಆಯ್ಕೆಯಾಗುತ್ತಿದ್ದರು ! ಏ) ಹೊರಗಿನ ಹಿರಿಯ ಕಾರ್ಮಿಕ ನಾಯಕರು ಸಂಧಾನಕ್ಕೆ ಬರುತ್ತಿದ್ದುದರಿಂದ ಅವರ ಅನುಕೂಲಕ್ಕನುಗುಣವಾಗಿ ಸಭೆಯ ಸ್ಥಳ ಮತ್ತು ಸಮಯಗಳನ್ನು ನಿರ್ಧರಿಸಲಾಗುತ್ತಿದ್ದುದು ಮತ್ತೊಂದು ವಿಶೇಷ ಆಡಳಿತ ವರ್ಗದ ಹಿರಿಯ ಸದಸ್ಯರೂ ಸಹ ಇದಕ್ಕೆ ತಕ್ಕಂತೆ ತಮ್ಮ ಇತರ ಅಧಿಕೃತ ಕಾರ್ಯಕ್ರಮಗಳನ್ನು ಹೊಂದಿಸಿಕೊಳ್ಳುತ್ತಿದ್ದರು. ಐ) ಹೊರಗಿನ ನಾಯಕರು ಸಂಧಾನ ನಡೆಸುತ್ತಿದ್ದುದರಿಂದ ಕೆಲವು ವಿಷಯಗಳಲ್ಲಿ ಕಾರ್ಮಿಕರಿಗೆ ಲಾಭವಾಗುತ್ತಿತ್ತು. ಅವರು ಸಂಸ್ಥೆಯ ನಿರ್ದೇಶಕರ ಮಟ್ಟದಲ್ಲಿ ನೇರವಾಗಿ ಸಂಬಂಧವಿರಿಸಕೊಂಡಿದ್ದರಿಂದ ಸಮಸ್ಯೆ ಜಟಿಲವಾದ ಸಂದರ್ಭಗಳಲ್ಲಿ ನಿರ್ದೇಶಕರು ಮಧ್ಯ ಪ್ರವೇಶ ಮಾಡುವಂತೆ ಅವರು ಮನವೊಲಿಸಬಹುದಿತ್ತು ಮತ್ತು ಅವರು ಪದೇ ಪದೇ ಸಭೆಗಳಿಗೆ ಬಂದು ವಿನಾಕಾರಣ ಸಮಯ ಪೋಲಾಗಲು ಅವಕಾಶವಿಲ್ಲದ್ದುದರಿಂದ ವಿಷಯಗಳನ್ನು ಬೇಗನೆ ಇತ್ಯರ್ಥಗೊಳಿಸಲು ಕಾತರರಾಗಿರುತ್ತಿದ್ದರು. ಇದು ಗುರಿಯನ್ನು ತಲುಪಲು ಸಹಕಾರಿಯಾದ ಅಂಶವಾಗಿತ್ತು. ಒ) ಹೊರಗಿನ ನಾಯಕರಷ್ಟೇ ಅಲ್ಲದೆ ಆಂತರಿಕ ನಾಯಕರಲ್ಲಿಯೂ ಕೆಲವರು ಅತ್ಯಂತ ಬುದ್ಧಿವಂತರಾಗಿದ್ದು ಅವರಲ್ಲಿ ಐಎನ್‍ಟಿಯುಸಿಯ ರಮೇಶ ಮತ್ತು ಚಂದ್ರೇಶ್ ಮತ್ತು ಸಿಐಟಿಯುನ ನಾಗೇಶ್ವರ, ಬಾಲಸುಬ್ರಮಣಿ ಮತ್ತು ಮುಕುಂದ ಪ್ರಮುಖರು. ಮುಂದೆ ಅವರಲ್ಲಿ ಕೆಲವರು ಮೇಲ್ವಿಚಾರಕರ ಹುದ್ದೆಗೂ ಸಹ ಅರ್ಹರಾದರು. ಓ) ಗುತ್ತಿಗೆದಾರರ ಮೂಲಕ ಕೆಲಸ ಮಾಡುತ್ತಿದ್ದ ಕಾರ್ಮಿಕರ ಬೇಡಿಕೆಗಳನ್ನೀಡೇರಿಸಲೆಂದೇ ಮತ್ತೊಂದು ಕಾರ್ಮಿಕ ಸಂಘ ಸ್ಥಾಪನೆಗೊಂಡಿತ್ತು. ಇದಕ್ಕೆ ಕಾರಣ ಖಾಯಂ ಕಾರ್ಮಿಕರಿಗೆಂದು ಮೀಸಲಾಗಿದ್ದ ಕಾರ್ಮಿಕ ಸಂಘ ಈ ವರ್ಗದ ಜನರ ಬೇಡಿಕೆಗಳನ್ನು ಎತ್ತಿಕೊಳ್ಳುತ್ತಿರಲಿಲ್ಲ - ಅದು ಸ್ವಲ್ಪ ಜಟಿಲ ಸ್ವರೂಪದ್ದಾಗಿದ್ದುದರಿಂದ ಆ ಸಂಘದ ನಾಯಕರಾಗಿ ಶ್ರೀ ಶಿವಶಂಕರ್ ರೂಪುಗೊಂಡು ಅವರಿಗೆ ಅಧಿಕೃತ ಸ್ಥಾನಮಾನ ನೀಡದೇ ಅನೌಪಚಾರಿಕವಾಗಿ ಅವರ ಸಮಸ್ಯೆಗಳೇನಾದರೂ ಇದ್ದಲ್ಲಿ ಆಗಿಂದಾಗ್ಗೆ ಅವನ್ನು ಬಗೆಹರಿಸುತ್ತಿದ್ದೆವು. ಒಟ್ಟಿನಲ್ಲಿ ಮೈಕೊ ಕಾಮಿಕ ಸಂಘಗಳೊಂದಿಗೆ ಅತ್ಯಂತ ಹತ್ತಿರದಿಂದ ವ್ಯವಹರಿಸಿದ ನಾನು ಹೆಚ್ಆರ್ ವೃತ್ತಿಪರ ವ್ಯಕ್ತಿಯಾಗಿ ಇನ್ನಾವುದೇ ಕಾರ್ಮಿಕ ಸಂಘವನ್ನು ಮ್ಯಾನೇಜ್ ಮಾಡಬಲ್ಲೆನು ಎಂಬುವಷ್ಟು ಗಟ್ಟಿ ಅನುಭವ ಪಡೆದೆನು. 3) ಹಿಮತ್‍ಸಿಂಗ್ಕ ಸಂಸ್ಥೆಯಲ್ಲಿ ಕೈಗಾರಿಕಾ ಸಂಬಂಧಗಳು ಕಳೆದ ಇಪ್ಪತ್ತು ವರ್ಷಗಳಿಂದಲೂ ಅತ್ಯಂತ ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಕಳೆದ ಎಂಟು ವರ್ಷಗಳಿಂದ ನಾನೂ ಸಹ ಈ ಬಾಂಧವ್ಯದ ಕೊಂಡಿಯಾಗಿ ನನ್ನ ಅಲ್ಪಕಾಣಿಕೆಯನ್ನು ನೀಡಿರುವುದು ನನಗೆ ಸಂತಸ ತಂದಿರುವ ವಿಚಾರವಾಗಿದೆ. ಸಂಸ್ಥೆಯು ವಹಿವಾಟಿನ ದೃಷ್ಟಿಯಿಂದ ಅತ್ಯಂತ ಉತ್ಕೃಷ್ಟ ರೇಷ್ಮೆ ಬಟ್ಟೆಗಳನ್ನು ತಯಾರಿಸುತ್ತಿದ್ದು ಇದನ್ನು ಅಮೆರಿಕಾ ಹಾಗೂ ಯೂರೋಪ್ ದೇಶಗಳ ಉನ್ನತ ಶ್ರೇಣಿಯ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶದ ಮೇಲ್ವರ್ಗದ ಗ್ರಾಹಕರಿಗೂ ನಮ್ಮ ಉತ್ಪನ್ನಗಳನ್ನು ತಲುಪಿಸಬೇಕೆಂಬ ದೃಷ್ಟಿಯಿಂದ ಕಳೆದ ಐದು ವರ್ಷಗಳಿಂದ ವಿವಿಧ ನಗರಗಳಲ್ಲಿ ನಮ್ಮದೇ ಮುದ್ರೆ ಅಟ್ಮಾಸ್‍ಫಿಯರ್ ಮೂಲಕ ನಾವೇ ನಡೆಸುತ್ತಿರುವ ಮಾರಾಟ ಮಳಿಗೆಗಳಿಂದಲೇ ಮಾರಾಟ ಮಾಡಲಾಗುತ್ತಿದ್ದು ಒಟ್ಟು 12 ಮಳಿಗೆಗಳನ್ನು ಭಾರತದಲ್ಲಿಯೂ, 2 ಮಳಿಗೆಗಳನ್ನು ಕ್ರಮವಾಗಿ ದುಬೈ ಮತ್ತು ಸಿಂಗಪುರಗಳಲ್ಲಿಯೂ ನಡೆಸಲಾಗುತ್ತಿದೆ. ಹಿಮತ್‍ಸಿಂಗ್‍ಕದಲ್ಲಿ ಕಳೆದ ಎರಡು ದಶಕಗಳ ಕೈಗಾರಿಕಾ ಸಂಬಂಧಗಳನ್ನು ಅವಲೋಕಿಸಿದಾಗ ಮುಖ್ಯವಾದ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ.(1) ಅಂತರ ರಾಷ್ಟ್ರೀಯ ಗ್ರಾಹಕರನ್ನು ಹೊಂದಿರುವುದರಿಂದಲೂ ಮತ್ತು ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಗಳಿರುವುದರಿಂದಲೂ ನಿರಂತರವಾಗಿ ಉತ್ಪಾದನಾ ಮಟ್ಟ ಕಡಿಮೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿತ್ತು. (2) ಇದರೊಂದಿಗೆ ಒಂದೂವರೆ ದಶಕದಿಂದಲೂ (ಕಳೆದ ಕೆಲವು ಸಾಲುಗಳನ್ನು ಹೊರತುಪಡಿಸಿ) ಸಂಸ್ಥೆಯ ಮಾರಾಟದ ಮಟ್ಟ ಮತ್ತು ಲಾಭದಾಯಕತೆ ಅತ್ಯುತ್ತಮವಾಗಿದ್ದಿತು. ಈ ಎರಡು ಕಾರಣಗಳಿಂದಾಗಿ ಕಾರ್ಮಿಕರ ಪರವಾಗಿ ಮುಂದಿಟ್ಟ ಬೇಡಿಕೆಗಳನ್ನು ಮೊದಲಿನಿಂದ ಹೆಚ್ಚು ಸಕಾರಾತ್ಮಕವಾಗಿಯೇ ಪರಿಗಣಿಸಲು ಆಡಳಿತವರ್ಗಕ್ಕೆ ಸಾಧ್ಯವಾಗಿದೆ. ಪರಿಣಾಮವಾಗಿ ಇತರ ಸ್ಪರ್ಧಾತ್ಮಕ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಹಿಮತ್‍ಸಿಂಗ್‍ಕದ ಕಾರ್ಮಿಕರ ವೇತನಮಟ್ಟ ಅಧಿಕವಾಗಿದೆ. ಈಗ್ಗೆ ಹತ್ತು ತಿಂಗಳುಗಳಿಂದೀಚೆಗಿನ ವಿಶ್ವದ ಆರ್ಥಿಕ ಹಿನ್ನಡೆಯ ಪರಿಣಾಮದಿಂದಾಗಿ ಸಂಸ್ಥೆಯ ಉತ್ಪಾದನಾ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದರಿಂದ ಈ ಲೆಕ್ಕಾಚಾರಕ್ಕೆ ತೀವ್ರ ಪೆಟ್ಟುಬಿದ್ದಿದೆ ಹಾಗೂ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನೆತ್ತಿವೆ. ಆದಾಗ್ಯೂ ಈಗಲೂ ಸಂಸ್ಥೆ ಹೊಂದಿರುವ ಉತ್ತಮವೆನ್ನಬಹುದಾದ ಸ್ಥಿತಿಗೆ ಇನ್ನೊಂದು ಮೂಲ ಕಾರಣವೆಂದರೆ ಉದ್ಯೋಗಿಗಳ ವಿಷಯದಲ್ಲಿ ನಮ್ಮ ಆಡಳಿತವರ್ಗ, ಅದರಲ್ಲೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿನೇಶ್ ಹಿಮತ್‍ಸಿಂಗ್‍ಕರಿಗಿರುವ ಕಾಳಜಿ ಮತ್ತು ನ್ಯಾಯಯುತ ಧೋರಣೆ. ಮೇಲಿನ ಕಾರಣಗಳಿಂದಾಗಿ ಕಳೆದ ಸುಮಾರು ಎರಡು ದಶಕಗಳ ಕಾಲ ಕಾರ್ಖಾನೆಯಲ್ಲಿ ಕೈಗಾರಿಕಾ ಶಾಂತಿ ನೆಲೆಸಿದ್ದು, ಆಡಳಿತವರ್ಗ ಮತ್ತು ಕಾರ್ಮಿಕ ಸಂಘ, ಸಂಸ್ಥೆ ಮತ್ತು ಉದ್ಯೋಗಿಗಳು, ಸಿಬ್ಬಂದಿವರ್ಗ ಮತ್ತು ಕಾರ್ಮಿಕ ಸಂಘ ಇವರುಗಳ ನಡುವೆ ಮಧುರವಾದ ಬಾಂಧವ್ಯದ ವಾತಾವರಣ ನಿರ್ಮಾಣವಾಗಿದೆ. ಇಪ್ಪತ್ತು ವರ್ಷಗಳಿಂದಲೂ ಯಾವುದೇ ಉತ್ಪಾದನಾ ನಷ್ಟವನ್ನನುಭವಿಸದೆ ಶಿಸ್ತಿನಿಂದ ನಡೆಯುತ್ತಿದೆ. ಸಂಸ್ಥೆಯ ಬೆಳವಣಿಗೆಯ ಜೊತೆಯಲ್ಲೇ ಕಾರ್ಮಿಕರೂ ಅವರ ಕುಟುಂಬಗಳೊಂದಿಗೆ ಬೆಳೆಯುತ್ತಲೇ ಬರುತ್ತಿರುವುದು ಹರ್ಷದಾಯಕ ಸಂಗತಿಯಾಗಿದೆ. ಇಲ್ಲಿ ಮೊದಲಿನಿಂದಲೂ ಆಂತರಿಕವಾಗಿ ಒಂದು ಕಾರ್ಮಿಕ ಸಂಘವೇ (ಹೆಚ್.ಎಸ್.ಎಲ್. ಎಂಪ್ಲಾಯೀಸ್ ಯೂನಿಯನ್) ನೆಲೆಯೂರಿದ್ದು ಕಾರ್ಮಿಕರ ಪರವಾಗಿ ಆಡಳಿತವರ್ಗದೊಂದಿಗೆ ಸಮಾಲೋಚಿಸಲು ಮಾನ್ಯತೆ ಪಡೆದಿದೆ. ಹೊರಗಿನ ಯಾವುದೇ ಸಂಘಟನೆಯನ್ನಾಗಲಿ ಕಾರ್ಮಿಕ ನಾಯಕರನ್ನಾಗಲಿ ಕರೆತರುವ ಪ್ರಮೇಯ ಇಲ್ಲಿ ತಲೆದೋರಿಲ್ಲ. ಕಳೆದ ಒಂದು ವರ್ಷದಿಂದೀಚೆಗೆ ಕಾರ್ಮಿಕ ಸಂಘದಲ್ಲಿ ಕೆಲವು ಬದಲಾವಣೆಗಳಾಗಿ ಹೊಸ ನಾಯಕತ್ವ ಹೊರಹೊಮ್ಮಿದೆ. 2008ರ ಮೇ 15ರಂದು ಚುನಾವಣೆ ನಡೆಯುವ ಮೊದಲು ಸುಮಾರು 18 ವರ್ಷಗಳ ಕಾಲ ಒಂದೇ ತಂಡ ಕಾರ್ಮಿಕ ಸಂಘದ ಚುಕ್ಕಾಣಿ ಹಿಡಿದು ಹಲವಾರು ವೇತನ ಒಪ್ಪಂದಗಳನ್ನು ಅಂತಿಮಗೊಳಿಸಿತು. ಕಾರ್ಮಿಕ ಸಂಘದ ಸಕಾರಾತ್ಮಕ ಕೊಡುಗೆಯೆಂದರೆ ಕಾರ್ಖಾನೆಯಲ್ಲಿ ಶಿಸ್ತಿನ ವಾತಾವರಣವನ್ನು ನಿರ್ಮಾಣಗೊಳಿಸಲು ಆಡಳಿತವರ್ಗದೊಂದಿಗೆ ನೆರವಾಗಿರುವುದು. ಇದರಿಂದ ಸಂಸ್ಥೆ ಗ್ರಾಹಕರ ಬೇಡಿಕೆಗಳನ್ನು ಆಗಿಂದಾಗ್ಗೆ ಪೂರೈಸುತ್ತಾ ಒಳ್ಳೆಯ ನಂಬಿಕಸ್ಥ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ. ಸಂಸ್ಥೆ ಹಂತಹಂತವಾಗಿ ಬೆಳೆದು ಈ ಘಟಕದಿಂದ ಇನ್ನೆರಡು ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವಂತಾಗಿದೆ. ಕಾರ್ಮಿಕ ಸಂಘದ ನಾಯಕತ್ವದಲ್ಲಿ ಬದಲಾವಣೆಯಾದ ನಂತರ ಹೊಸ ನಾಯಕತ್ವದೆದುರಿಗಿರುವ ಸವಾಲುಗಳೆಂದರೆ : ಅ) ವಿಶ್ವ ಮಾರುಕಟ್ಟೆ, ಅದರಲ್ಲಿಯೂ ಅಮೆರಿಕಾದ ಆರ್ಥಿಕ ವ್ಯವಸ್ಥೆ ಅತ್ಯಂತ ಸಂಕೀರ್ಣ ಮುಗ್ಗಟ್ಟಿನ ಪರಿಸ್ಥಿತಿಯನ್ನೆದುರಿಸುತ್ತಿದ್ದು ಅದು ಯೂರೋಪ್ ರಾಷ್ಟ್ರಗಳಿಗೂ ಹರಡಿರುವುದರಿಂದ ನಮ್ಮ ಸಂಸ್ಥೆಯ ಮೇಲೆಯೂ ಅದರ ಪರಿಣಾಮವುಂಟಾಗಿ ಬೇಡಿಕೆಯ ಮಟ್ಟ ಕಡಿಮೆಯಾಗುತ್ತಿರುವ ಸಂದರ್ಭವನ್ನು ಎದುರಿಸುವಲ್ಲಿ ಆಡಳಿತ ವರ್ಗದೊಂದಿಗೆ ಸಹಕರಿಸುವುದು. ಆ) ಸಂಸ್ಥೆಯ ಕಾರ್ಮಿಕರಲ್ಲಿ ಸುಮಾರು ಅರ್ಧಭಾಗ ಹಿರಿಯ ಉದ್ಯೋಗಿಗಳಿದ್ದು ಇನ್ನುಳಿದ ಅರ್ಧ ಭಾಗ ಕಿರಿಯ ಉದ್ಯೋಗಿಗಳು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಉದ್ಯೋಗಿಗಳ ಸಕಾರಾತ್ಮಕ ಗುಣ, ಸಂಸ್ಥೆಯ ಬಗೆಗಿನ ಕಾಳಜಿಯ ಮನೋಭಾವಗಳನ್ನು ಉಳಿಸಿ, ಬೆಳೆಸುವುದರೊಂದಿಗೆ ಕಿರಿಯರ ಉತ್ಸಾಹ, ಹುಮ್ಮಸ್ಸುಗಳನ್ನು ಹೊಂದಿಸಿಕೊಂಡು ಮುಂದುವರೆಯಬೇಕಾಗಿದೆ. ಹೊಸ ಚಿಗುರು - ಹಳೆ ಬೇರುಗಳೆರಡರ ನಡುವೆ ಸೂಕ್ತ ಸಾಮರಸ್ಯವನ್ನು ಸಾಧಿಸಬೇಕಾಗಿದೆ. ಇ) ಸಂಸ್ಥೆ ಮೊದಲಿಗಿಂತಲೂ ಹೆಚ್ಚಿನ ಪೈಪೋಟಿಯನ್ನೆದುರಿಸುತ್ತಿದ್ದು ಉತ್ಪಾದಕತೆಯಲ್ಲಿ ಮತ್ತು ಗುಣಮಟ್ಟಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದರೊಂದಿಗೆ ಎಲ್ಲ ರೀತಿಯ ನಷ್ಟ / ದುಂದು ವೆಚ್ಚಗಳನ್ನು ಕಡಿತಗೊಳಿಸಿ, ಗ್ರಾಹಕರಿಗೆ ಸರಿಯಾದ ಸಮಯದೊಳಗೆ ಅತ್ಯಂತ ಕಡಿಮೆ ಬೆಲೆಯ ಉತ್ಪನ್ನಗಳನ್ನು ತಯಾರಿಸಿ ಅವರಿಗೆ ಪೂರೈಸಬೇಕಾಗುತ್ತದೆ. ಕಾರ್ಮಿಕರೆಲ್ಲರೂ ತಮ್ಮ ಕೆಲಸಗಳನ್ನು ಮಾಡುವಾಗ ಈ ದೊಡ್ಡ ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ನಡೆಯುವಂತೆ ಅವರನ್ನು ಪ್ರೇರೇಪಿಸಬೇಕಾಗುತ್ತದೆ. ಈ) ಹೊರಗಿನಿಂದ ಶಿಸ್ತನ್ನು ಹೇರುವ ಬದಲಾಗಿ ಸ್ವಯಂ-ಶಿಸ್ತನ್ನು ಎಲ್ಲ ಉದ್ಯೋಗಿಗಳೂ ಮೈಗೂಡಿಸಿಕೊಂಡು ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಕಾರ್ಮಿಕ ಸಂಘ ಪಣತೊಡಬೇಕಾಗಿದೆ. ಉ) ಗ್ರಾಹಕರು ಕಂಪೆನಿಗೆ ನೀಡುತ್ತಿರುವ ಬೇಡಿಕೆಯ ಮಟ್ಟದಲ್ಲಿ ಏರುಪೇರಾಗುವುದರಿಂದ ಸೂಕ್ತ ರೀತಿಯಲ್ಲಿ, ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚುವರಿ ಉತ್ಪಾದನಾ ಮಟ್ಟವನ್ನು ತಲುಪಲು ಉತ್ಪಾದನಾ ವ್ಯವಸ್ಥೆಗಳನ್ನು, ಉದ್ಯೋಗಿಗಳ ಸಂಖ್ಯೆಯನ್ನು ತಾತ್ಕಾಲಿಕ ಏರಿಳಿತಗಳಿಗೆ ಸರಿದೂಗುವಂತೆ ಹೊಂದಿಸಿಕೊಳ್ಳಲು ಸಹಕರಿಸಬೇಕಾಗುತ್ತದೆ. ಊ) ಹಲವಾರು ವರ್ಷಗಳಿಂದಲೂ ಸಂಸ್ಥೆಯ ಬೆಳವಣಿಗೆಯಲ್ಲಾಗಲೀ ಕಾರ್ಮಿಕರ ಜೀವನ ಮಟ್ಟದಲ್ಲಾಗಲಿ ಇಳಿತ ಕಂಡಿಲ್ಲದ ಹಿನ್ನೆಲೆಯಲ್ಲಿ ಈ ರೀತಿಯ ಭಾರಿ ಏರಿಳಿತದ ಬೇಡಿಕೆಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಪರಸ್ಪರ ಚರ್ಚಿಸಿ ಸೂಕ್ತ ಪರಿಹಾರಗಳನ್ನು ಸಮಯ ಪೋಲಾಗದಂತೆ ಕ್ಷಿಪ್ರವಾಗಿ ಕಂಡುಕೊಳ್ಳಬೇಕಿದೆ. ಋ) ಸಂವಹನ ಪ್ರಕ್ರಿಯೆಯನ್ನು ಇನ್ನೂ ಹೆಚ್ಚು ಚುರುಕುಗೊಳಿಸಿ ಸಂಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ಉದ್ಯೋಗಿಗಳೊಂದಿಗೆ ಸ್ಪಷ್ಟವಾಗಿ ಅವರ ಮನಮುಟ್ಟುವಂತೆ ತಿಳಿಸಬೇಕಾಗುತ್ತದೆ. ಋೂ) ಕಾರ್ಮಿಕ ಸಂಘದ ಪದಾಧಿಕಾರಿಗಳ ಪಾತ್ರ ಗುರುತರವಾದುದು. ವೈಯಕ್ತಿಕ ನೆಲೆಯಲ್ಲಿ, ದೃಷ್ಟಿಕೋನಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಮೀರಿದ ದೂರದೃಷ್ಟಿಯ , ಹಿರಿದಾದ ಗುರಿಯನ್ನು ಸಾಧಿಸುವತ್ತ ಅವರು ಶ್ರಮಿಸಬೇಕಾಗಿದೆ. ಸಾಮೂಹಿಕ ನಾಯಕತ್ವ ಮತ್ತು ಪ್ರಜಾಪ್ರಭುತ್ವ ತತ್ವಗಳಿಗನುಸಾರವಾಗಿ ಎಲ್ಲರೊಡನೆ ಸಮಾಲೋಚಿಸಿ, ಸಲಹೆಗಳನ್ನು ಪಡೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತಾದರೂ, ಎಲ್ಲ ಸಂದರ್ಭಗಳಲ್ಲೂ ಎಲ್ಲ ವಿಷಯಗಳಲ್ಲೂ ಈ ರೀತಿ ನಡೆಯಲಾಗುವುದಿಲ್ಲ. ಒಟ್ಟಾರೆ ಸಂಸ್ಥೆಯ ದೃಷ್ಟಿಯಿಂದ, ಉದ್ಯೋಗಿಗಳ ಹಿತದೃಷ್ಟಿಯಿಂದ ಆದಷ್ಟು ಬೇಗನೆ ನ್ಯಾಯಯುತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎ) ಸಂಸ್ಥೆಯು ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಮಾರುಕಟ್ಟೆಯಲ್ಲಿ ಕಷ್ಟಪಟ್ಟು ಸಂಪಾದಿಸಿರುವ ನಾಯಕತ್ವದ ಸ್ಥಾನದಲ್ಲೇ ಇನ್ನೂ ಹಲವಾರು ವರ್ಷಗಳ ಕಾಲ ಮುಂದುವರೆಯಬೇಕಾದರೆ, ಎಲ್ಲ ಕ್ಷೇತ್ರಗಳಲ್ಲೂ ಉತ್ಕೃಷ್ಟತೆಯನ್ನು ಸಾಧಿಸಬೇಕಾಗುತ್ತದೆ. ಸಂಸ್ಥೆಯ ಏಳ್ಗೆಯೊಂದಿಗೆ ಕಾರ್ಮಿಕ ವರ್ಗದ ಭವಿಷ್ಯದ ಬೆಸುಗೆಯಾಗಿರುವುದರಿಂದ ಈ ನಿಟ್ಟಿನಲ್ಲಿ ಹಿಮತ್‍ಸಿಂಗ್‍ಕ ಕಾರ್ಮಿಕ ಸಂಘದ ಪಾತ್ರ ಗುರುತರವಾದುದಾಗಿದೆ. ಮೂರು ವಿವಿಧ ರೀತಿಯ ಸಂಸ್ಥೆಗಳ ಕಾರ್ಮಿಕ ಸಂಘಗಳೊಂದಿಗಿನ ನನ್ನ ಹತ್ತಿರದ ಒಡನಾಟದಲ್ಲಿ ಕಂಡುಕೊಂಡ ಪ್ರಮುಖ ಅಂಶಗಳು : ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಸಾರ್ವಜನಿಕ ಉದ್ದಿಮೆ, ಜರ್ಮನಿ ಮೂಲದ ಆಟೊಮೊಬೈಲ್ ಕ್ಷೇತ್ರದ ಮುಖ್ಯ ಬಹುರಾಷ್ಟ್ರೀಯ ಸಂಸ್ಥೆ ಮತ್ತು ಖಾಸಗಿ ಕ್ಷೇತ್ರದ ವಿಶಿಷ್ಟ ದೇಶೀಯ ಸಂಸ್ಥೆ - ಈ ಮೂರೂ ವೈವಿಧ್ಯಮಯ ಸಂಸ್ಥೆಗಳಲ್ಲಿನ ಕಾರ್ಮಿಕ ಸಂಘಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಿ ಅದರಿಂದ ಪಡೆದ ಅನುಭವವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕೆಳಗಿನ ಅಂಶಗಳು ಬೆಳಕಿಗೆ ಬರುತ್ತವೆ. 1) ಬದಲಾದ ಸ್ಪರ್ಧಾತ್ಮಕ ಪರಿಸರದಲ್ಲಿ ಕೈಗಾರಿಕಾ ಸಂಸ್ಥೆಗಳು ತೀವ್ರ ಪೈಪೋಟಿಯನ್ನೆದುರಿಸುತ್ತಿದ್ದು ಕಾರ್ಮಿಕ ಸಂಘಗಳ ಹಿಂದಿನ ಧ್ಯೇಯೋದ್ದೇಶಗಳನ್ನು (ಕಾರ್ಮಿಕರಿಗೆ ಹೆಚ್ಚಿನ ವೇತನ, ಸವಲತ್ತುಗಳನ್ನು ಕೊಡಿಸುವುದು, ಕೆಲಸ ಮಾಡುವ ವಾತಾವರಣವನ್ನು ಸುಧಾರಿಸುವುದು, ಕೆಲಸದ ಹೊರೆಯನ್ನು ಕಡಿಮೆ ಮಾಡಿಸುವುದು) ಈಡೇರಿಸಿಕೊಳ್ಳುವುದು ದಿನೇ ದಿನೇ ದುಸ್ತರವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉಳಿಯಲು ಸಂಸ್ಥೆಗಳು ಹೆಚ್ಚಿನ ವೇಗದ ಗತಿಯಲ್ಲಿ ಚಲಿಸಬೇಕಿದ್ದು ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಂಸ್ಥೆಯಲ್ಲಿರುವ ಈ ಎಲ್ಲ ರೀತಿಯ ಕೊಬ್ಬುಗಳನ್ನು (flab) ತೆಗೆದುಹಾಕಿ, ಎಲ್ಲ ಉದ್ಯೋಗಿಗಳೂ ಹೆಚ್ಚಿನ ದಕ್ಷತೆಯಿಂದ ದುಡಿಯಬೇಕಾಗಿದೆ. ಈಗಿರುವ ಸ್ಥಾನದಲ್ಲಿ ಉಳಿಯಬೇಕಾದರೂ ಮೊದಲಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ನಮನೀಯತೆಯನ್ನು ತೋರಬೇಕಾಗಿದೆ. ಇದರಿಂದಾಗಿ ಹೆಚ್ಚಿನ ವೇತನ, ಸವಲತ್ತುಗಳನ್ನು ಪಡೆಯಬೇಕಿದ್ದರೆ ಸಂಸ್ಥೆ ಅಧಿಕ ಲಾಭದಾಯಕತೆಯಿಂದ ಮುನ್ನಡೆಯಲು ಉದ್ಯೋಗಿಗಳೆಲ್ಲರೂ ಇನ್ನೂ ಹೆಚ್ಚಿನ ಶ್ರಮಪಡಬೇಕಾಗಿದೆ. 2) ಇಂದಿನ ಉದ್ಯೋಗಿಗಳು ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಮೊದಲಿನ ಪೀಳಿಗೆಯ ಉದ್ಯೋಗಿಗಳಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು ಅವರೊಂದಿಗೆ ಪರಿಣಾಮಕಾರಿಯಾಗಿ ಸಂಭಾಷಿಸಲು ಕಾರ್ಮಿಕ ನಾಯಕರು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ. ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗಳು, ದೇಶೀಯ, ಅಂತರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟಗಳಲ್ಲಾಗುತ್ತಿರುವ ಪ್ರಮುಖ ಬದಲಾವಣೆಗಳು, ಸಂಸ್ಥೆ ಎದುರಿಸುತ್ತಿರುವ ಸಮಸ್ಯೆಗಳು ಇವುಗಳ ಜೊತೆಗೆ ಬೆಳೆಯುತ್ತಿರುವ ಕಾರ್ಮಿಕರ ಮಧ್ಯಮ ವರ್ಗದ ಆಶೋತ್ತರಗಳನ್ನು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಗುರುತರ ಹೊಣೆಗಾರಿಕೆ ಕಾರ್ಮಿಕ ಸಂಘಗಳ ಮೇಲಿದೆ. 3) ಇಂದಿನ ಪೀಳಿಗೆಯ ಕಾರ್ಮಿಕರೊಂದಿಗೆ ಸ್ಪಂದಿಸುವಾಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅವರ ಬೇಕು-ಬೇಡಗಳನ್ನು ಹತ್ತಿರದಿಂದ ಬಲ್ಲವರಾಗಿ ಅದನ್ನು ಆಡಳಿತವರ್ಗದೊಂದಿಗೆ ಎತ್ತಿಕೊಂಡು ಅವುಗಳ ಈಡೇರಿಕೆಗಾಗಿ ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕರ ಬೇಡಿಕೆಗಳನ್ನೆಲ್ಲವನ್ನೂ ಪೂರೈಸುವೆವೆಂಬ ಸಾಧ್ಯವಲ್ಲದ ಆಶ್ವಾಸನೆಗಳನ್ನು ಕಾರ್ಮಿಕರಿಗೆ ನೀಡದೆ, ಇತ್ತ ಕಡೆ ಆಡಳಿತವರ್ಗದೊಂದಿಗೆ ಬೆರೆತು ಅವರಿಂದ ಸಂಪೂರ್ಣವಾಗಿ ಪ್ರಭಾವಿತರಾಗಿದ್ದಾರೆಂಬ, ಕೈ ಕೈ ಮಿಲಾಯಿಸಿದ್ದಾರೆಂಬ ಕೊಂಕು ಅಪವಾದಕ್ಕೊಳಗಾಗದಂತೆ ಎರಡೂ ಕಡೆಗಳ ವಿಭಿನ್ನ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಮಧ್ಯಮ ಮಾರ್ಗದಲ್ಲಿ ನಡೆದಾಡುವ, ಅವುಗಳ ಮಧ್ಯೆ ಸಮತೋಲನವನ್ನು ಸಾಧಿಸುವ ಚಾಣಾಕ್ಷತನವನ್ನು ಕಾರ್ಮಿಕ ಸಂಘಗಳು ಗಳಿಸಿಕೊಳ್ಳಬೇಕಾಗಿದೆ. 4) ಸಂಸ್ಥೆಯೊಳಗಿನ ಆಂತರಿಕ ರಾಜಕೀಯ ಸ್ಥಿತಿ-ಗತಿಗಳನ್ನರಿತು ಉದ್ಯೋಗಿ ಸಮುದಾಯದಲ್ಲೇ ಅಭಿಪ್ರಾಯಗಳನ್ನು ರೂಪಿಸಬಲ್ಲ ಪ್ರಮುಖರಾದ ಕೆಲವು ಉದ್ಯೋಗಿಗಳನ್ನು ತಮ್ಮೊಂದಿಗೆ ಸೆಳೆದುಕೊಂಡು ತಾವು ತೆಗೆದುಕೊಳ್ಳುತ್ತಿರುವ ಹೆಜ್ಜೆಗಳನ್ನು ಅವರೊಂದಿಗೆ ಚರ್ಚಿಸಿ, ಅವರ ಸಲಹೆಗಳನ್ನು ಪಡೆದು, ಅವರ ಮೂಲಕವೇ ಉದ್ಯೋಗಿಗಳಿಗೆ ತಲುಪಿಸುವ ಶಕ್ತಿಯುತ ಸಂವಹನ ಶಕ್ತಿಯುತ ಕಾರ್ಮಿಕ ನಾಯಕರು ರೂಢಿಸಿಕೊಳ್ಳಬೇಕಾಗಿದೆ. 5) ಆಡಳಿತ ವರ್ಗದ ಪ್ರಮುಖರು, ಅದರಲ್ಲೂ ಮಾನವ ಸಂಪನ್ಮೂಲ ವಿಭಾಗ ಮತ್ತು ಉತ್ಪಾದನಾ ವಿಭಾಗದ ಪ್ರಮುಖರೊಂದಿಗೆ ನಿಕಟವಾಗಿ ಕೆಲಸ ಮಾಡಿ, ಸಂಸ್ಥೆಯ ಸ್ಥಿತಿ-ಗತಿಗಳ ಬಗ್ಗೆ ಆಗಿಂದಾಗ್ಗೆ ಅರಿವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ತಮ್ಮೆದುರಿರುವ ಸಮಸ್ಯೆಗಳಿಗೆ ಸೂಕ್ಷ್ಮ ಪರಿಹಾರಗಳನ್ನು ಕಂಡುಕೊಳ್ಳಲು ಅವರ ಸಲಹೆಗಳನ್ನು ಪಡೆದುಕೊಳ್ಳಬೇಕಿದೆ. 6) ಕಾರ್ಮಿಕರ ಸಮುದಾಯದಲ್ಲಿಯೇ ಒಂದು ರೀತಿಯ ವರ್ಗೀಕರಣ ವ್ಯವಸ್ಥೆಯೇರ್ಪಟ್ಟಿದ್ದು, ಖಾಯಂ ಉದ್ಯೋಗಿ, ಪ್ರೊಬೇಷನರಿ ಉದ್ಯೋಗಿ, ತರಬೇತಿ ಅವಧಿಯಲ್ಲಿರುವ ಉದ್ಯೋಗಿ, ತಾತ್ಕಾಲಿಕ ಆಧಾರದ ಮೇಲೆ ದುಡಿಯುತ್ತಿರುವ ಉದ್ಯೋಗಿ, ನಂತರ ಸಾಂದರ್ಭಿಕ ಉದ್ಯೋಗಿ, ಕಟ್ಟಕಡೆಯಲ್ಲಿ ಗುತ್ತಿಗೆ ಕಾರ್ಮಿಕ-ಹೀಗೆ ಇದೇ ಕ್ರಮದಲ್ಲಿ ಮೇಲ್ವರ್ಗದಿಂದ ಕೆಳವರ್ಗದವರೆಗೆ ವರ್ಗೀಕರಣ ವ್ಯವಸ್ಥೆಯೇರ್ಪಟ್ಟಿದ್ದು ಹೆಚ್ಚು ವೇತನ / ಸಂಬಳ ಪಡೆಯುವ ಖಾಯಂ ಕಾರ್ಮಿಕರು ಕಡಿಮೆ ಕೆಲಸ ಮಾಡುವ ಹಕ್ಕನ್ನು ಪಡೆದಿದ್ದೇವೆಂಬ ನಿಲುವನ್ನು ವ್ಯಕ್ತಪಡಿಸಿ, ಕಾರ್ಮಿಕ ಸಂಘದ ಮೇಲೆ ಒತ್ತಡ ಹೇರುತ್ತಿರುವುದು ಒಂದು ಕಡೆ ಕಂಡು ಬಂದರೆ ಮತ್ತೊಂದು ಕಡೆ ಅತ್ಯಂತ ಕಡಿಮೆ ವೇತನ ಪಡೆದು, ಉದ್ಯೋಗ ರಕ್ಷಣೆಯಿಲ್ಲದೆ ದುಡಿಯುತ್ತಿರುವ ಉದ್ಯೋಗಿ ತನಗೆ ಖಾಯಂ ಪಟ್ಟ ಪಡೆಯಬೇಕೆಂಬ ಆಸೆಯನ್ನು ಹೊತ್ತು ದುಡಿಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಖಾಯಂ ಪಟ್ಟ ಸಿಕ್ಕ ಮೇಲೆ ಹಿಂದೆ ತಾತ್ಕಾಲಿಕ ಸ್ಥಿತಿಯನ್ನು ಹೊಂದಿದ್ದ ಕಾರ್ಮಿಕನೂ ಗರಿಗೆದರಿ ತನ್ನ ಹಿಂಜರಿಕೆಯನ್ನು ತೊಡೆದು ಹಾಕಿ, ಖಾಯಂ ಕಾರ್ಮಿಕರ ಹಾದಿಯನ್ನೇ ತಳೆಯುವುದು ಸಾಮಾನ್ಯ ಛಾಳಿಯಾಗಿರುವುದನ್ನು ಉತ್ಪಾದನಾ ಘಟಕಗಳಲ್ಲಿ ಇಂದಿಗೂ ಗಮನಿಸಬಹುದಾಗಿದೆ. ಕಾರ್ಮಿಕ ಸಂಘಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತವೆ ಎಂಬುದರ ಮೇಲೆ ಈ ಮೇಲಿನ ವರ್ಗೀಕರಣ ವ್ಯವಸ್ಥೆಯ ಒಳಿತು-ಕೆಡುಕುಗಳು ನಿರ್ಧರಿತವಾಗುತ್ತವೆ. 7) ನನ್ನ ಒಡನಾಟದಲ್ಲಿ ಕಾರ್ಮಿಕ ಸಂಘದ ನಾಯಕರ ಮಾನವೀಯ ಮುಖವನ್ನು ಹತ್ತಿರದಿಂದ ನೋಡುವ ಅವಕಾಶ ಒದಗಿ ಬಂದದ್ದು ಹಲವಾರು ಸಂದರ್ಭಗಳಲ್ಲಿ ಅವರ ಮನಸ್ಸಿನಾಳದ ದುಗುಡಗಳು, ಕಾರ್ಮಿಕ ಸಮೂಹದಿಂದ ಅವರ ಮೇಲೆ ಹೇರಲಾಗುವ ಒತ್ತಡಗಳು, ಕೆಲಸದ ಹೊರೆ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ಸಮತೂಕವನ್ನು ಸಾಧಿಸಲಾಗಿದೆ ವಿಲಿವಿಲಿ ಒದ್ದಾಡುವ ಅವರ ಸ್ಥಿತಿ-ಇವುಗಳನ್ನು ಕಂಡು ಅವರ ಬಗ್ಗೆ ನೈಜವಾದ ಸಹಾನುಭೂತಿ ಮೂಡುತ್ತದೆ. ಅವರ ಕಷ್ಟಗಳಲ್ಲಿ ಸ್ವಲ್ಪಮಟ್ಟಿಗಾದರೂ ಭಾವನಾತ್ಮಕವಾಗಿ ಸ್ಪಂದಿಸಿ ಅವರಿಗೆ ನೆರವಾಗುವ ಭಾವನೆಯುಂಟಾಗುತ್ತದೆ. 8) ನಾಯಕರಾಗಿ ಬೇರೆ ಉದ್ಯೋಗಿಗಳೊಂದಿಗಿದ್ದುಕೊಂಡೇ ಅವರಿಗೆ ಮಾದರಿಯಾಗಿರಬೇಕಾಗುತ್ತದೆ. ನಾಯಕನಾದವನು ತನ್ನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ತನ್ನ ಮತ್ತು ತನ್ನ ಹತ್ತಿರದ ಕೆಲವು ಹಿಂಬಾಲಕರಿಗೆ ಮಾತ್ರ ಸಹಾಯವಾಗುವಂತೆ ಸ್ವಹಿತ ಸಾಧನೆಗಾಗಿಯೇ ದುಡಿಯುತ್ತ, ಬಹುಜನರ ಒಳಿತನ್ನು ಮರೆಯುವ ಪರಿಯನ್ನು ಎಷ್ಟೋ ನಾಯಕರು ಬೆಳೆಸಿಕೊಂಡಿರುವುದನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ. ಸಂಸ್ಥೆಗಿಂತ ತನ್ನ ಸ್ವಾರ್ಥ ಸಾಧನೆಯೇ ಪರಮಗುರಿಯೆಂದೂ, ಯಾರಿಂದ ತಾನು ಮೇಲಿನ ಸ್ಥಾನವನ್ನು ಪಡೆದಿದ್ದನೋ ಅವರ ಏಳಿಗೆಯನ್ನೇ ನಿರ್ಲಕ್ಷಿಸಿ, ಅವರಿಂದ ದೂರ ಹೋಗಿ ಸಂಸ್ಥೆಯ ಒಳಿತನ್ನು ಲೆಕ್ಕಿಸದೆ ಮುನ್ನಡೆದ ಹಲವು ನಾಯಕರು ಧೂಳೀಪಟವಾದ ನಿದರ್ಶನಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ರಾಜಕೀಯ ರಂಗದಲ್ಲಿರುವಂತೆ ತನ್ನ ಸ್ಥಾನವೂ ಶಾಶ್ವತವಲ್ಲ, ಅಧಿಕಾರದಲ್ಲಿರುವಷ್ಟು ಅವಧಿಯೂ ಉದ್ಯೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವುದೇ ತನ್ನ ಗುರಿಯೆಂದು ಅರಿತು ಶ್ರದ್ಧೆಯಿಂದಲೂ, ಸಾಮಾಜಿಕ ಬದ್ಧತೆಯಿಂದಲೂ ಕಾರ್ಮಿಕ ನಾಯಕರು ಕಾರ್ಯ ನಿರ್ವಹಿಸಬೇಕಾಗುತ್ತದೆ. 9) ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ ಒಗ್ಗಟ್ಟಿರಬೇಕಾಗುತ್ತದೆ. ನನ್ನ ಅನುಭವದಲ್ಲಿ, ಒಂದೇ ಬಣ್ಣವನ್ನು ಹೊತ್ತ, ಒಂದೇ ಚಿಹ್ನೆ ಪಡೆದ ಗುಂಪಿನಿಂದ ಆಯ್ಕೆಯಾಗಿ ಬಂದರೂ ನಾಯಕರಲ್ಲಿ, ಕಾರ್ಮಿಕ ಪ್ರತಿನಿಧಿಗಳಲ್ಲಿ ಒಮ್ಮತವಿರದೆ ಭಿನ್ನಾಭಿಪ್ರಾಯಗಳು ತಲೆದೋರಿ ವಿವಿಧ ಬಣಗಳು ರೂಪುಗೊಳ್ಳುವುದು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು, ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕರ ಬೆನ್ನ ಹಿಂದೆ ಅಪಪ್ರಚಾರ ನಡೆಸುವುದು, ಆಡಳಿತ ವರ್ಗದೊಂದಿಗೆ ಮಾತುಕತೆಗಳು ಜಾರಿಯಲ್ಲಿರುವಾಗಲೇ ಕಾರ್ಮಿಕರ ಬಳಿ ಹೋಗಿ ಸಭೆಗಳಲ್ಲಿ ಚರ್ಚಿಸಿದ ಮಾಹಿತಿಗಳನ್ನು ಆತುರಾತುರವಾಗಿ ತಿಳಿಸುವುದು, ತಮಗೆ ನಿಷ್ಠರಾದ ಕೆಲವೇ ಮಂದಿ ಆಪ್ತ ಸಹೋದ್ಯೋಗಿಗಳ ಏಳ್ಗೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಸಂಬಂಧಿಸಿದ ವಿಷಯಗಳನ್ನು ಸಾಧಿಸಿಕೊಳ್ಳುವ ಸೀಮಿತರ ಗುರಿಯನ್ನು ಹೊಂದಿ ಮುನ್ನಡೆಯುವುದು, ತಮ್ಮ ಕಾಲೆಳೆಯುತ್ತಿರುವ ಇತರ ಪದಾಧಿಕಾರಿಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಅವರು ಎಡವಿ ಬೀಳಲಿಯೆಂದು ಒಳಗೊಳಗೇ ಎಣಿಸಿಕೊಂಡು ಸಭೆಗಳಲ್ಲಿ ತಟಸ್ಥವಾಗಿದ್ದುಕೊಂಡು, ಸಭೆ ಮುಗಿದ ಮೇಲೆ ಕಾರ್ಮಿಕ ಸದಸ್ಯರ ಬಳಿ ಹೋಗಿ ತನ್ನ ಸಹ-ಪದಾಧಿಕಾರಿ ಮಾಡಿದ ತಪ್ಪನ್ನು ದೊಡ್ಡದಾಗಿ ಆಡಿ ತೋರಿಸುವುದು - ಇವುಗಳನ್ನು ನಾನು ಕಂಡಿದ್ದೇನೆ. ಎಷ್ಟೋ ಬಾರಿ ಕಾರ್ಮಿಕ ಸಂಘಗಳ ಪದಾಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಕಂಡು ಆಡಳಿತವರ್ಗದ ಪರವಾಗಿ ಅದನ್ನು ಲಾಭದಾಯಕವಾಗಿ ತಿರುಗಿಸಿಕೊಳ್ಳುವ ಅವಕಾಶವಿದ್ದರೂ ಅಂಥ ಕ್ಷುಲ್ಲಕ ರಾಜಕೀಯಕ್ಕೆ ಜೋತು ಬೀಳದೆ, ಶೀತಲ ಯುದ್ಧ ಹೂಡಿರುವ ನಾಯಕರಿಬ್ಬರನ್ನೂ ಒಟ್ಟುಗೂಡಿಸಿ ಒಂದಾಗಿ ದುಡಿಯುವಂತೆ ಸಲಹೆ ನೀಡಿದ್ದೇನೆ. ಸಂಸ್ಥೆಯಲ್ಲಿ ಜವಾಬ್ದಾರಿ ಸ್ಥಾನವನ್ನು ಹೊಂದಿದ ನನ್ನ ಪಾತ್ರದ ಬಹುಮುಖ್ಯವಾದ ಭಾಗವೆಂದು ಇದನ್ನು ಪರಿಗಣಿಸಿ ಎರಡು ವಿಭಿನ್ನ ಗುರಿಗಳನ್ನು ಹೊಂದಿರುವ ನಾಯಕರಿಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತೇನೆ. 10) ಕಾರ್ಮಿಕ ಸಂರ್ಘ ಬಲಿಷ್ಟವಾಗಿದ್ದಲ್ಲಿ ಮಾತ್ರ ಸಂಸ್ಥೆಯೂ ಒಳ್ಳೆಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಪ್ರಬಲ ನಾಯಕತ್ವ ಹೊಂದಿದ ತಂಡಗಳು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಕೆಲವೇ ಕೆಲವು ಕಾರ್ಮಿಕರ ಒತ್ತಡಗಳನ್ನೆದುರಿಸಲಾರದೆ ಕುಸಿದು ಬೀಳುತ್ತವೆ. ಇತ್ತ ಆಡಳಿತವರ್ಗ ಕಾರ್ಮಿಕ ಸಂಘವನ್ನು ಲೆಕ್ಕಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಆರೋಗ್ಯಕರ, ಔದ್ಯೋಗಿಕ ಸಂಸ್ಕೃತಿಯ ಬುನಾದಿಗೇ ಕೊಡಲಿಪೆಟ್ಟು ಇಟ್ಟಂತಾಗುತ್ತದೆ. ಈ ಅತಂತ್ರ ಸ್ಥಿತಿಯಿಂದ ಕಾರ್ಖಾನೆ ಮತ್ತು ಉದ್ಯೋಗಿಗಳಿಬ್ಬರಿಗೂ ತೊಂದರೆಯುಂಟಾಗುತ್ತದೆ. ಆದುದರಿಂದ ಕಾರ್ಮಿಕ ಸಂಘದ ಯಶಸ್ಸು ಸಂಸ್ಥೆಯ ಯಶಸ್ಸಿನ ಮೂಲದಲ್ಲಿ ಅಡಗಿದೆ. ಹ್ಯೂಮನ್ ರಿಸೋರ್ಸ್ ಪ್ರೊಫೆಶನಲ್ ಆಗಿ ಪಡೆದುಕೊಂಡ ಅನುಭವಗಳ ಹಿನ್ನೆಲೆಯನ್ನಾಧರಿಸಿ ಕಾರ್ಮಿಕ ಸಂಘಗಳೊಂದಿಗೆ ವ್ಯವಹರಿಸಬಹುದಾದ ಬಗೆಯ ಕುರಿತು ವಿಶ್ಲೇಷಣೆ : ಅ) ಕಾರ್ಮಿಕ ಸಂಘದ ನಾಯಕರೊಂದಿಗೆ ಬಹುತೇಕ ನೇರವಾಗಿ ನೈಜ ಚಿತ್ರಣವನ್ನು ಅಂಕಿ-ಅಂಶಗಳೊಂದಿಗೆ ಹಂಚಿಕೊಂಡರೆ ಅವರು ಅದನ್ನು ಸ್ವೀಕರಿಸುತ್ತಾರೆ. ಆ) ಕಾರ್ಮಿಕ ನಾಯಕರೂ ಸಹ ಸಂಸ್ಥೆಯ ಬಗ್ಗೆ ಕಾಳಜಿ ಹೊಂದಿದ್ದು ಸಂಸ್ಥೆಯ ಒಳಿತನ್ನು ಬಯಸುತ್ತಾರೆ. ಆದರೆ ಅವರ ಕಷ್ಟ, ಸಂಘದ ಉದ್ದೇಶಗಳನ್ನರಿತು ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಇ) ಬಹಳಷ್ಟು ನಾಯಕರು ಸರಳತೆಯನ್ನು ಮುಗ್ಧತೆಯನ್ನು ಹೊಂದಿರುವುದರಿಂದ ಆಡಳಿತವರ್ಗ ಅವರ ನೆರವಿಗೆ ಬರಬೇಕಾಗುತ್ತದೆ. ಅವರಲ್ಲಿ ಸಮರ್ಥ ನಾಯಕತ್ವದ ಗುಣಗಳನ್ನು ತುಂಬುವ ಜವಾಬ್ದಾರಿ ಆಡಳಿತವರ್ಗದ ಮೇಲೂ ಇರುತ್ತದೆ. ಆದಾಗ್ಯೂ ಈ ಬಗ್ಗೆ ಅತ್ಯುತ್ಸಾಹ ತೋರಿಸದೆ ಅವರಲ್ಲೇ ಹುದುಗಿರುವ ನಾಯಕತ್ವದ ಗುಣಗಳನ್ನು ಗುರುತಿಸಿ ಹೊರಹೊಮ್ಮಿಸುವುದಕ್ಕಷ್ಟಕ್ಕೇ ನಮ್ಮ ಪಾತ್ರವನ್ನು ಸೀಮಿತಗೊಳಿಸಬೇಕಾಗುತ್ತದೆ. ಈ) ವಿವಿಧ ಹಿನ್ನೆಲೆಗಳನ್ನು ಹೊಂದಿರುವ ನಾಯಕರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಲೂ, ಅರ್ಥವಂತಿಕೆಯಿಂದಲೂ ನಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಕಾರ್ಮಿಕ ನಾಯಕರು ಎಡವಿದರೂ ಆಡಳಿತ ವರ್ಗವು ಕಾರ್ಮಿಕ ವರ್ಗದೆಡೆಗಿರುವ ತನ್ನ ಜವಾಬ್ದಾರಿಯನ್ನರಿತು ಸಂಸ್ಥೆಯ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಬೇಕಾಗುತ್ತದೆ. ಉ) ಆಡಳಿತವರ್ಗದ ಕಡೆ ಸಂಧಾನಕ್ಕೆ ಕುಳಿತರೂ, ಕಾರ್ಮಿಕ ನಾಯಕರ ದೃಷ್ಟಿಕೋನದಿಂದಲೂ ಸಮಸ್ಯೆಯನ್ನು ವಿಶ್ಲೇಷಿಸುವ ಗುಣ ಹೊಂದಿರಬೇಕಾಗುತ್ತದೆ. ಊ) ನಿರ್ಧರಿತ ವಿಷಯಗಳನ್ನು ಜನರಿಗೆ ಸೂಕ್ಷ್ಮವಾಗಿ ಮುಟ್ಟಿಸುವ ಪ್ರಕ್ರಿಯೆಯಲ್ಲಿಯೂ ಆಡಳಿತವರ್ಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಅದನ್ನು ಎಷ್ಟು ಪರಿಣಾಮಕಾರಿಯಾಗಿ ತಲುಪಿಸಬಹುದೆಂಬುದನ್ನು ಯೋಚಿಸಬೇಕಾಗಿದೆ. ಋ) ಇದರ ಜೊತೆಗೆ, ಸಂಧಾನದ ಪ್ರಕ್ರಿಯೆಯಲ್ಲಿ ಹೊರಬಂದ ಪ್ರಮುಖ ಅಂಶಗಳನ್ನು ಮಧ್ಯಮ ವರ್ಗದ ಮೇಲ್ವಿಚಾರಕರು, ಆಡಳಿತ ವರ್ಗದ ಇತರ ಪ್ರಮುಖ ಅಧಿಕಾರಿಗಳು ಒಪ್ಪಿಕೊಂಡು ಅದರ ಅರ್ಥಬದ್ಧ ಅನುಷ್ಠಾನದಲ್ಲಿ ಅವರ ಪಾತ್ರದ ಮಹತ್ವವನ್ನು ಅವರಿಗೆ ತಿಳಿಸಿಹೇಳಿ, ಅವರ ಸಂಪೂರ್ಣ ಬೆಂಬಲವನ್ನು ಪಡೆಯಬೇಕಾದುದು ಕೈಗಾರಿಕಾ ಸಂಬಂಧಗಳನ್ನು ಹದವಾಗಿ ಕಾಯ್ದಿರಿಸಬೇಕಾದ ವೃತ್ತಿಪರನ ಜವಾಬ್ದಾರಿಯ ಪ್ರಮುಖ ಭಾಗವಾಗಿದೆ.
3 Comments
11/28/2017 11:24:08 pm
An excellent article with history of Unionisation and its developments. The author has succintly put out his experiences with reference to the principles and practices of 70s and 80s that would throw light on the need of healthy Industrial Relations that would be reflected in the Human Resource Management principles.
Reply
Prakasha RM
11/29/2017 01:17:30 am
ಲೇಖನವು ಉತ್ತಮವಾಗಿ ಮೂಡಿ ಬಂದಿದೆ. 1990ರ ನಂತರದ ಬೆಳವಣಿಗೆಯನ್ನುವಿವರವಾಗಿ ತಿಳಿಸಿದ್ದಾರೆ. ಲೇಖನವು ಆರ್ಥಿಕ ವ್ಯವಸ್ಥೆಯ ಮೇಲೆ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮ, ನಂತರದ ದಿನಗಳಲ್ಲಿ ಅದು ಸಂಸ್ಥೆಗಳಲ್ಲಿ ಔದ್ಯೋಗಿಕ ಸಂಬಂಧಗಳ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದರ ಮೇಲೂ ಬೆಳಕು ಚೆಲ್ಲಿದ್ದಾರೆ.ಸಂಸ್ಥೆಗಳ ಮತ್ತು ಕಾರ್ಮಿಕ ಸಂಘಟನೆಗಳ ಮನೊವೃತ್ತಿಯ ಬದಲಾವಣೆ ಉತ್ತಮವಾದದ್ದು.ಕಾರ್ಮಿಕ ನಾಯಕರುಗಳ ಬದ್ದತೆ ಮತ್ತು ಪ್ರಭುದ್ದತೆಯನ್ನು ಮೆಚ್ಚಲೇಬೇಕು. ಒಟ್ಟಾರೆ ಉತ್ತಮ ಲೇಖನ ಮತ್ತು ಲೇಖಕರು ಹಲವು ನೈಜ ದುಷ್ಟಾಂತಗಳ ಮೂಲಕ ಓದುಗರಿಗೆ ಈ ವಿಷಯದಲ್ಲಿ ಹೆಚ್ಚು ಆಸಕ್ತಿ ಬರುವಂತೆ ಮಾಡಿದ್ದಾರೆ.
Reply
V Srinivasa
12/14/2017 10:50:21 pm
Sir, Nice article . You enlightened us with IR / HR principles which we can adapt in day to day dealings with the Unions'.
Reply
Your comment will be posted after it is approved.
Leave a Reply. |
RAMESHA NIRATANKACategories
All
Nirathanka Citizens Connect50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |