Nirathanka
  • HOME
  • About Us
    • TESTIMONIALS
  • Our Services
    • Corporate Social Responsibility
    • Tree Plantation Project
    • Awareness Programme
    • Rural & Community Development
  • Online Store
  • HR Kannada Conference
  • POSH
    • PoSH Blog
    • Our Clients
    • Our Associates
    • Want to Become an External Member for an Internal Committee?
  • Training Modules
    • Labour Laws & Labour Codes
    • Winning
  • BLOG
  • Collaborate with Nirathanka
    • Join Our Online Groups
  • Nirathanka Club House
  • Media Mentions
    • Photo Gallery
    • Video Gallery
  • Contact Us
  • HOME
  • About Us
    • TESTIMONIALS
  • Our Services
    • Corporate Social Responsibility
    • Tree Plantation Project
    • Awareness Programme
    • Rural & Community Development
  • Online Store
  • HR Kannada Conference
  • POSH
    • PoSH Blog
    • Our Clients
    • Our Associates
    • Want to Become an External Member for an Internal Committee?
  • Training Modules
    • Labour Laws & Labour Codes
    • Winning
  • BLOG
  • Collaborate with Nirathanka
    • Join Our Online Groups
  • Nirathanka Club House
  • Media Mentions
    • Photo Gallery
    • Video Gallery
  • Contact Us
Nirathanka

ಕನ್ನಡ ಭಾಷೆಯ ಉಳಿಕೆಯ ಪಾಲುದಾರರಾಗಿ ಮಾನವ ಸಂಪನ್ಮೂಲ ಅಧಿಕಾರಿಗಳು

7/9/2018

1 Comment

 
Picture
ನವೀನ್ ನಾಯ್ಕ್
ಆಫೀಸರ್, ಮಾನವ ಸಂಪನ್ಮೂಲ ವಿಭಾಗ,
ಎಸ್ಸಿಲಾರ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈ.ಲಿ., ಬೆಂಗಳೂರು.

ಪೀಠಿಕೆ
ಭಾಷೆ ಎಂಬುದು ಅನಾದಿ ಕಾಲದಿಂದಲೂ ಸಂವಹನದ ಒಂದು ಮುಖ್ಯ ಭಾಗವಾಗಿ ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪೂರಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶಃ ಭಾಷೆ ಎಂಬುದೇ ಒಂದು ಸಾಧನವಾಗಿ ಮಾನವ ಮತ್ತು ಮೃಗಗಳನ್ನು ಬೇರ್ಪಡಿಸಿದೆ ಎಂದರೆ ತಪ್ಪಲ್ಲ. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೇಳಿಕೊಳ್ಳುವಷ್ಟು ಇತಿಹಾಸ ಮತ್ತು ಅವಿತವ್ಯ ಪರಂಪರೆಯ ಬೆಂಬಲವಿದೆ. ಭಾಷೆ ಕೇವಲ ಶಬ್ದಗಳ ಆಡಂಬರವಾಗದೆ ಜನರ ಜೀವನಾಡಿಯಲ್ಲಿ ಬೆರೆತು ಹೋಗಿರುತ್ತದೆ. ಸಂಸ್ಕೃತಿಯ ಕೈಪಿಡಿಯಾಗಿ, ಆಚಾರ-ವಿಚಾರಗಳ ಬೆನ್ನೆಲುಬಾಗಿ, ವೃತ್ತಿಧರ್ಮಕ್ಕೆ ಆಸರೆಯಾಗಿ, ಸಂವಹನ ಕಲೆಯನ್ನು ಪೋಷಿಸುತ್ತಾ ಊರಿಂದ ಊರಿಗೆ ನಾಲಗೆಯ ಮೇಲೆ ಹರಿದಾಡಿ ತನ್ನ ತುಂಬು ತೋಳುಗಳಿಂದ ಜನರನ್ನು ಸೆಳೆದಪ್ಪಿಕೊಂಡ ಪರಿಯೇ ಅದ್ಭುತವಾದದ್ದು, ಭಾಷೆಯ ಬೆಂಬಲವಿಲ್ಲದೆ ಇದ್ದರೆ ಮಾನವನ ಬಾಯಿಂದ ಹೊರಟ ರೋದನೆಗಳೆಲ್ಲ ಚೀರಾಟಗಳಾಗಿರುತ್ತಿತ್ತು. ಅಕ್ಷರ ಜೋಡಣೆಗಳಿಲ್ಲದೆ ಅನುಭವಗಳು ಅರ್ಥ ಕಳೆದುಕೊಳ್ಳುತ್ತಿದ್ದವು.
ಕನ್ನಡ ಎಂಬುದು ಕೇವಲ ಒಂದು ಭಾಷೆ ಎಂದರೆ ಮಾತುಗಳೇ ಅಪೂರ್ಣವಾಗುತ್ತದೆ. ಕನ್ನಡಿಗರ ಭಾಷಾಭಿಮಾನ ಎಂಬುದು ಸ್ವಾಭಿಮಾನದ ಕಿಚ್ಚಿನಲ್ಲಿ ಬೆಂದು ಊರಿಂದ ಹೊನಲು ಬೆಳಕಿನಂತೆ, ತನ್ನ ಬುಡದಲ್ಲಿ ಕತ್ತಲೆ ಆವರಿಸಿದ್ದರೂ ಪರರ ಬಾಳಿಗೆ ಬೆಳಕಾದ ನಿದರ್ಶನಗಳು ಹೆಚ್ಚಾಗಿವೆ. ಜಗತ್ತು ಇಂದು ತನ್ನ ವಿಸ್ತಾರತೆಯನ್ನು ಮರೆಮಾಚಿ ನಮ್ಮೂರಿನ ಪುಟ್ಟ ಮಾರುಕಟ್ಟೆಯಾಗಿ ಮಾರ್ಪಾಡುಗೊಂಡಿರುವಾಗ ಆದಂತಹ ಹಲವು ಬದಲಾವಣೆಗಳ ಮಧ್ಯ ಸ್ಥಳೀಯ ಭಾಷೆಗಳು ಬಲಿಯಾಗುತ್ತಾ ಸಾಗಿರುವುದು ಒಂದು ಎಂದರೆ ಅತಿಶಯೋಕ್ತಿ ಎನಿಸಲಾರದು. ಉದರ ಪೋಷಣೆಯ ನಿಮಿತ್ಯ ಉದ್ಯೋಗದ ನಾನಾ ವೇಷಗಳಲ್ಲಿ ಅಲೆಮಾರಿ ಜೀವನ ಸಾಗಿಸುತ್ತಿರುವ ದಿನಗಳು ಹೆಚ್ಚಾಗಿದೆ. ಅದೆಲ್ಲೋ ದೂರದ ಬಿಹಾರದಿಂದ ಬೆಂಗಳೂರಿನ ಬನಶಂಕರಿಗೆ ಬಂದು ನೆಲೆ ನಿಂತಿದ್ದಾರೆ, ಅಪ್ಪಟ ಕನ್ನಡದ ಅರೆಕೆರೆಯ ಹುಡುಗ ಅಮೆರಿಕಾಗಾಗಿ ದುಡಿಯುತ್ತಿದ್ದಾನೆ. ಕರುನಾಡಿನ ನೆಲ-ಜಲವೇ ಇವರೀರ್ವರಿಗೂ ಬದುಕು ಕಲ್ಪಿಸಿದೆ. ಆದರೆ ಅವರಿಗೆಂದು ಕನ್ನಡ ಭಾಷೆ ಅನಿವಾರ್ಯ ಎನಿಸಿಲ್ಲ. ಕಾರಣ ಹುಡುಕಿದರೆ ಅತಿಥಿಯ ಆತಿಥ್ಯ ಎನ್ನಬೇಕೊ ಅಥವಾ ಆಲಸ್ಯದ ಪರಮಾವಧಿ ಎನ್ನಬೇಕೊ ತಿಳಿಯದಾಗಿದೆ.
 
ಕನ್ನಡ ಭಾಷೆ ಮತ್ತು ವೃತ್ತಿಪರ ಮಾನವ ಸಂಪನ್ಮೂಲ ಅಧಿಕಾರಿಗಳು
ಕಳೆದ ಕೆಲವು ವಸಂತಗಳಿಂದ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸುಮಾರು ಮೂರ್ನಾಲ್ಕು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ, ವಿವಿಧ ಸ್ತರದ ಆಡಳಿತ ಮತ್ತು ಅಲ್ಲಿ ಕನ್ನಡಕ್ಕೆ ದೊರೆತ ಸ್ಥಾನಮಾನಗಳನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಮತ್ತು ದೌರ್ಭಾಗ್ಯಗಳೆರಡೂ ಲೇಖಕರವಾಗಿದೆ. ಅನಿವಾರ್ಯಕ್ಕೆ ಆಂಗ್ಲ ಭಾಷೆಯನ್ನು ಬಳಸಿದರೂ ಕೂಡ ಕನ್ನಡದ ನಾಲಗೆಯನ್ನು ಉಳಿಸಿಕೊಂಡು ಸಾಗಿದ್ದಾರೆ. ಹೆಚ್ಚು ಭಾಷೆಗಳ ಮೇಲೆ ಪ್ರೌಢಿಮೆ ಸಾಧಿಸುವುದು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಹೆಚ್ಚಿನ ಅವಕಾಶಗಳು ಒದಗಿಸುತ್ತದೆ. ಮಾನವ ಸಂಪನ್ಮೂಲ ವಿಭಾಗ ಕಾರ್ಯನಿರ್ವಹಿಸುವ ವಿಧಾನವೇ ಹಾಗೆ. ಮಾನವ ಸಂಪನ್ಮೂಲ ಅಧಿಕಾರಿಗಳ ಸಮಯದ ವಿನಿಯೋಗ ಕಾರ್ಮಿಕರ ಕುಂದು ಕೊರತೆ ಆಲಿಸುವುದಕ್ಕಾಗಿ ಹಾಗೂ ಅವರ ಕ್ಷೇಮಾಭಿವೃದ್ಧಿಯ ನಿರ್ವಹಣೆಗೆ ಮೀಸಲಾಗಿರುತ್ತದೆ.

ಈ ಒಂದು ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಚಟುವಟಿಕೆಗಳು ಎಂದಿಗೂ ಕಾರ್ಮಿಕ ಮತ್ತು ಆಡಳಿತ ವರ್ಗಕ್ಕೆ ಸೇತುವೆಯ ಹಾಗೆ ಸಾಗಬೇಕಾದ ಅನಿವಾರ್ಯವಿದೆ. ಆದ್ದರಿಂದ ಕನ್ನಡದ ಜೊತೆಗೆ ಆಡಳಿತ ವರ್ಗ ಬಯಸುವ ಬಹು ಜನರಿಗೆ ತಲುಪಬಲ್ಲ ಆಂಗ್ಲ ಭಾಷೆಯ ಅಗತ್ಯ ಕೂಡ ಇದೆ. ಕನ್ನಡದ ಮೇಲಿನ ಅಭಿಮಾನ ಎಂಬುದು ಪರ ಭಾಷೆಯ ದ್ವೇಷದಿಂದ ಜನಿಸುವುದಲ್ಲ, ಆಡಳಿತವರ್ಗ ಮತ್ತು ಸರಕಾರ ವಿಧಿಸಿದ ಎಲ್ಲ ನಿಯಮಗಳು ಪ್ರತಿಯೊಬ್ಬ ಕಾರ್ಮಿಕರಿಗೆ ಮನದಟ್ಟು ಮಾಡುವಂತೆ ಭಾಷಾಂತರಿಸಿ ಕನ್ನಡ ಉಳಿಸಬೇಕಾದ ಮಹತ್ತರ ಜವಾಬ್ದಾರಿ ಮಾನವ ಸಂಪನ್ಮೂಲ ವಿಭಾಗಕ್ಕೆ ಇದೆ. ಮಹಾತ್ಮ ಗಾಂಧೀಜಿ ಅವರ ಮಾತಿನಲ್ಲಿ ಹೇಳಬೇಕಾದರೆ ಯಾವುದೇ ವಿಷಯವನ್ನು ಎಷ್ಟೇ ಪರಿಣಿತರು ಮಂಡಿಸಿದರೂ ಅದು ಬುದ್ಧಿಗೆ ಮಾತ್ರ ತಲುಪುತ್ತದೆ, ಹೃದಯಕ್ಕೆ ತಲುಪಬೇಕಾದರೆ ಅವರ ಮಾತೃ ಭಾಷೆಯಲ್ಲಿ ಹೇಳಿದರೆ ಮಾತ್ರ ಸಾಧ್ಯ. ಕಂಪನಿಯಲ್ಲಿ ಕೆಲಸದ ಹೊರತು ಅತಿ ಹೆಚ್ಚು ಸಂವಹನ ನಡೆಸಬೇಕಾಗಿದ್ದು ಮಾನವ ಸಂಪನ್ಮೂಲ ವಿಭಾಗದೊಂದಿಗೆ ಮಾತ್ರ. ಕರುನಾಡಿನಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಕನ್ನಡ ತಿಳಿದಿದ್ದರೆ ಮಾತ್ರ ಕಾರ್ಮಿಕರ ಹೃದಯ ತಲುಪಲು ಸಾಧ್ಯವಾಗುತ್ತದೆ.

ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳು ಕನ್ನಡವನ್ನೇ ಆಡಳಿತ ಭಾಷೆಯಾಗಿ, ಸಂವಹನ ಮಾಧ್ಯಮವಾಗಿ ಬಳಸಬೇಕಾದಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರ ಮಹತ್ತರವಾದದ್ದು, ಸ್ಥಳೀಯ ಭಾಷಿಕರಿಗೆ ಹೆಚ್ಚಿನ ಆದ್ಯತೆ ಮತ್ತು ಆಡಳಿತ ವರ್ಗಕ್ಕೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗಬೇಕಾದರೆ ಕನ್ನಡವನ್ನು ಮಾಧ್ಯಮವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಇದೊಂದು ವಿಭಾಗ ಮಾತ್ರ ಉದ್ಯೋಗಿಗಳ ನೇಮಕಾತಿಯಿಂದ ಹಿಡಿದು ನಿರ್ಗಮನದವರೆಗೆ ಸಂಭವಿಸುವ ಎಲ್ಲ ಬೇಕು ಬೇಡಗಳಿಗೆ ಜವಾಬ್ದಾರಿಯುತವಾಗಿರುತ್ತದೆ. ಹತ್ತು ಹಲವು ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ವಿಭಾಗವು ಪರಿಣಾಮಕಾರಿಯಾಗಿ ಉದ್ಯೋಗಿಗಳನ್ನು ತಲುಪಬೇಕಾದಲ್ಲಿ ಕನ್ನಡದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಪ್ರತಿ ಕೆಲಸದಲ್ಲೂ ಪ್ರೇರಣೆ ಮತ್ತು ಗುರುತಿಸುವಿಕೆಯನ್ನು ಅಪೇಕ್ಷಿಸುವ ಉದ್ಯೋಗಿವರ್ಗ ತಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುವ ಅಧಿಕಾರಿಗಳೊಂದಿಗೆ ಹೆಚ್ಚು ಬೆರೆತುಕೊಳ್ಳುತ್ತಾರೆ. ದಿನಕಳೆದಂತೆ ಸ್ಥಳೀಯ ವೈಚಾರಿಕತೆಯನ್ನು ತೊರೆದು ವಿದೇಶದ ಅವಶ್ಯಕತೆಗಳಿಗೆ ಕಾರ್ಯ ನಿರ್ವಹಿಸುವುದು ಹೆಚ್ಚಾದ ಹಾಗೆ ಕನ್ನಡವು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯವಾಗಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ಭಾಷೆ ಮರು ಸ್ಥಾಪನೆಗೆ ಮಾನವ ಸಂಪನ್ಮೂಲ ಅಧಿಕಾರಿಗಳ ಸಕ್ರೀಯ ಪಾತ್ರ ಅತ್ಯವಶ್ಯಕ.
 
ಯಾರು ಕನ್ನಡಿಗರು.....?
ಕನ್ನಡ ಭಾಷೆ ಮತ್ತು ನೆಲ-ಜಲದ ಉಳಿವಿಗೆ ಕನ್ನಡಿಗರು ಸಂಕಲ್ಪ ತೊಟ್ಟು ಕಾರ್ಯನಿರ್ವಹಿಸುವ ಅಗತ್ಯ ತುಂಬಾ ಇದೆ, ಎಂಬುದು ಜಗಜ್ಜಾಹೀರಾದ ವಿಷಯ. ಆದರೆ ವಲಸಿಗರೇ ಹೆಚ್ಚಾದ ಬೆಂಗಳೂರಿನಂತ ನಗರಗಳಲ್ಲಿ ಯಾರು ಕನ್ನಡಿಗರು ಎಂಬುದು ಉತ್ತರ ಹೊಳೆಯದ ಕೊನೆಯಿರದ ಪ್ರಶ್ನೆ ಆಗಿದೆ. ಕನ್ನಡಿಗರು ಎಂದರೆ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದವರು ಮಾತ್ರವೇ ? ಅಥವಾ ಬೇರೆ ಊರುಗಳಿಂದ ಬಂದವರು ಸಹ ಕನ್ನಡಿಗರು ಆಗಲು ಸಾಧ್ಯವೇ ? ಎಂದು ಪ್ರಶ್ನಿಸಿದರೇ ಉತ್ತರ ಹುಡುಕಿಕೊಳ್ಳುವುದು ಕಷ್ಟಸಾಧ್ಯ. ಅದೆಷ್ಟೋ ಸಾರಿ ಕನ್ನಡಿಗರಿಗಿಂತ ಪರ ಭಾಷಿಕರೇ ಕನ್ನಡದ ಮೇಲೆ ಹೆಚ್ಚಿನ ಮಮತೆ ಸಾರಿದ್ದಾರೆ. ಕನ್ನಡವನ್ನು ದಶದಿಕ್ಕುಗಳಲ್ಲೂ ಬೆಳಗಿಸಿದ್ದಾರೆ. ಕಿಟೆಲ್ ಕನ್ನಡ ಭಾಷೆಗೆ ಬೃಹದಾಕಾರದ ನಿಘಂಟನ್ನು ಒದಗಿಸಿದ್ದು, ಮ್ಯಾಕ್ಸ್ ಮುಲ್ಲರ್ ವಚನ ಸಾಹಿತ್ಯದ ಕೀರ್ತಿಯನ್ನು ಪರದೇಶಗಳಿಗೆ ಪಸರಿಸುವಂತೆ ಮಾಡಿದ್ದು ಕನ್ನಡ ಭಾಷೆಗೆ ಅವರು ನೀಡಿದ ಅನನ್ಯ ಕೊಡುಗೆಯೇ ಸರಿ.
​
ಮಾನವ ಸಂಪನ್ಮೂಲ ವಿಭಾಗದಲ್ಲಿಯೂ ಸಹ ಕನ್ನಡೇತರ ಅನೇಕ ಅಧಿಕಾರಿಗಳು ಕನ್ನಡ ಕುರಿತು ಕಳಕಳಿ ಹೊಂದಿದ್ದಾರೆ. ಅವರ ಪ್ರಾಮಾಣಿಕ ಕಳಕಳಿ ನವೆಂಬರ್ ತಿಂಗಳಲ್ಲಿ ಮಾತ್ರ ಮಾತನಾಡುವ ರಾಜಕಾರಣಿಗಳು ಮತ್ತು ಕನ್ನಡ ಪರ ಹೋರಾಟಗಾರರಿಗಿಂತ ಶ್ರೇಷ್ಠವಾದದ್ದು.
 
ಮಾನವ ಸಂಪನ್ಮೂಲ ಅಧಿಕಾರಿಗಳಾಗಿ ಕನ್ನಡಿಗರು
ಕನ್ನಡ ನಾಡಿನಲ್ಲಿ ನೈಸರ್ಗಿಕ ಸಂಪನ್ಮೂಲದ ಜೊತೆಗೆ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಕೈಗಾರಿಕೆ ಮತ್ತು ತೃತೀಯ ವಲಯಗಳ ಬೇಡಿಕೆಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲದ ಕೌಶಲ್ಯ ಅಭಿವೃದ್ಧಿಗೊಳಿಸುವುದು. ಪ್ರಸ್ತುತ ಮಾನವ ಸಂಪನ್ಮೂಲ ಅಧಿಕಾರಿಗಳ ಬಹುಮುಖ್ಯ ಕಾರ್ಯವಾಗಿ 2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 61095297 ಆಗಿದ್ದು ಅದರಲ್ಲಿ 30966657 (50.7%) ಪುರುಷರು, 30128640 (49.3%) ಮಹಿಳೆಯರಾಗಿರುತ್ತಾರೆ. ಪ್ರತಿ ಸಾವಿರ ಪುರುಷರಿಗೆ 973 ಮಹಿಳೆಯರಿದ್ದಾರೆ. ಜನಸಂಖ್ಯೆಯಲ್ಲಿ 2001ರ ಜನಗಣತಿಗೆ ಹೋಲಿಸಿದರೆ 15.60% ಹೆಚ್ಚಳವಾಗಿದೆ. ಜನಸಾಂದ್ರತೆ ಪ್ರತಿ ಕಿ.ಮೀ.ಗೆ 319 ಆಗಿದೆ. ಕನ್ನಡ ಮಾತೃಭಾಷೆಯಾಗಿ 66.26% ಜನರು ಬಳಸುತಿದ್ದು, ಹಲವು ಭಾಷಾ ಅಲ್ಪಸಂಖ್ಯಾತರ ಪಟ್ಟಿ ಈ ಕೆಳಗಿನಂತಿದೆ. ಉರ್ದು : 10.54%, ತಮಿಳು : 3.57%, ತುಳು : 3%, ಕೊಂಕಣಿ : 1.46%, ತೆಲುಗು : 7.03%, ಮರಾಠಿ : 3.6%, ಹಿಂದಿ : 2.56%, ಮಲಯಾಳಿ : 1.33 %, ಕೊಡವ : 0.3% ಈ ರೀತಿಯಾಗಿದೆ.

Picture
ಕರ್ನಾಟಕ ರಾಜ್ಯದಲ್ಲಿ 22 ವಿಶ್ವವಿದ್ಯಾಲಯಗಳು, 200 ಇಂಜಿನಿಯರಿಂಗ್ ಕಾಲೇಜುಗಳು, 200 ಪಾಲಿಟೆಕ್ನಿಕ್ ಮತ್ತು 300 ಕೈಗಾರಿಕಾ ತರಬೇತಿ ಕೇಂದ್ರಗಳು ಮಾನವ ಸಂಪನ್ಮೂಲದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸೌಲಭ್ಯಗಳ ಮಧ್ಯೆ ವೃತ್ತಿಪರತೆಗೆ ಅನುಕೂಲವಾಗುವ ಉದ್ದೇಶದಿಂದ ಅನ್ಯ ಭಾಷೆಗಳಿಗೆ ಹೆಚ್ಚಿನ ಮಹತ್ವ ದೊರಕಿದ್ದು ಕನ್ನಡ ಭಾಷೆಯ ಬಳಕೆ ಕುಸಿಯುತ್ತಾ ಸಾಗಿದೆ. ಸುಮಾರು 80000 ಇಂಜಿನಿಯರ್‍ಗಳು, 50000 ದಷ್ಟು ಡಾಕ್ಟರೇಟ್ ಪದವೀಧರರು, ಶಿಕ್ಷಿತರಲ್ಲಿ 27% ಉನ್ನತ ವ್ಯಾಸಂಗ ಹೊಂದಿದವರು ತಮ್ಮ ಕೆಲಸದ ಪರಿಧಿಯಲ್ಲಿ ಆಂಗ್ಲ ಭಾಷೆಯ ಬಳಕೆಯ ಜೊತೆಗೆ ಮನೆಯಲ್ಲಿ, ಮಾರುಕಟ್ಟೆಯಲ್ಲಿ, ಸಾಮಾಜಿಕ ವೇದಿಕೆಗಳಲ್ಲಿ, ಕೊನೆಗೆ ಸಹಾಯಕ್ಕಾಗಿ ಕರೆ ಮಾಡುವ ಗ್ರಾಹಕರ ಸಹಾಯವಾಣಿಯಲ್ಲಿಯೂ ಸಹ ಇಂಗ್ಲೀಷ್ ಭಾಷೆಯಲ್ಲಿ ಉತ್ತರಿಸುವುದರಿಂದ ಕನ್ನಡ ಭಾಷೆ ಅವಸಾನದಂಚಿಗೆ ಸಾಗುತ್ತಿದೆ.

ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ, ಕಾರ್ಖಾನೆಗಳಲ್ಲಿ, ತೃತೀಯ ರಂಗದಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಮಾನವ ಸಂಪನ್ಮೂಲ ಅಧಿಕಾರಿಗಳು ನಿಜಕ್ಕೂ ಶ್ರಮಿಸಬೇಕಿದೆ. ಸಾವಿರ ಸಂಖ್ಯೆಯಲ್ಲಿ ಬರುವ ನುರಿತ ಉದ್ಯೋಗಿಗಳಿಗೆ ಮಾನವ ಸಂಪನ್ಮೂಲ ವಿಭಾಗದ ಹೊರತು ಬೇರೆ ಯಾರಿಂದಲೂ ಕನ್ನಡದ ಪರಿಚಯ ಮಾಡಿಸಿಕೊಡಲು ಸಾಧ್ಯವಿಲ್ಲ.
 
ಮಾನವ ಸಂಪನ್ಮೂಲ ವಿಭಾಗಕ್ಕೆ ಕನ್ನಡದ ಅಗತ್ಯತೆ :
ಕನ್ನಡ ಭಾಷೆ ಯಾವುದೇ ವೃತ್ತಿ, ಜನಾಂಗ, ಆಡಳಿತ ಸ್ತರಗಳ, ಬೆಂಬಲವಿಲ್ಲದೆ ಬೃಹದಾಕಾರವಾಗಿ ಬೆಳೆದ ಆಲದಮರ, ಭಾಷೆಯ ಇತಿಹಾಸ ತಿಳಿದಿದ್ದರೆ ಇದರ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಮಾನವ ಸಂಪನ್ಮೂಲ ವಿಭಾಗ ಕನ್ನಡ ನೆಲದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕನ್ನಡದ ಕಲಿಕೆ ಮತ್ತು ಬಳಕೆ ಅತ್ಯಗತ್ಯ. ಈ ಕೆಳಕಂಡ ಕೆಲವು ಅಂಶಗಳಿಂದ ಮಾನವ ಸಂಪನ್ಮೂಲ ವಿಭಾಗಕ್ಕೆ ಕನ್ನಡ ಅಗತ್ಯವಾಗಿದ್ದು, ಭಾಷೆಯ ಉಳಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಬಹುದು.
  • ಕನ್ನಡದ ನೆಲ-ಜಲಗಳನ್ನು ಬಳಸಿಕೊಂಡು ಸ್ಥಾಪಿಸಿದ ಕಾರ್ಖಾನೆಗಳಲ್ಲಿ ಈ ನೆಲದ ಮಕ್ಕಳಿಗೆ ಉದ್ಯೋಗ ಪಡೆಯುವ ಹಕ್ಕಿದೆ. ಅಂತಹ ಎಲ್ಲ ಕನ್ನಡಿಗ ಉದ್ಯೋಗಿಗಳೊಂದಿಗೆ ಮಾನವ ಸಂಪನ್ಮೂಲ ವಿಭಾಗವು ಕನ್ನಡದಲ್ಲಿ ವ್ಯವಹರಿಸಬೇಕಾಗುತ್ತದೆ.
  • ಕನ್ನಡಿಗರ ನೇಮಕಾತಿಯ ಸಂದರ್ಭದಲ್ಲಿ, ಉದ್ಯೋಗ ಪ್ರಕಟಣೆಗೆ, ಕೌಶಲ್ಯ ಭರಿತ ಉದ್ಯೋಗಿಗಳ ಆಯ್ಕೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಳಕೆ ಅತ್ಯಂತ ಪ್ರಸ್ತುತ.
  • ಸರಕಾರದಿಂದ ಹೊರಡಿಸಿದ ಸುತ್ತೋಲೆಗಳನ್ನು ಮತ್ತು ಕಾನೂನುಗಳನ್ನು ಪರಿಪಾಲಿಸುವುದು ಎಲ್ಲ ಆಡಳಿತ ವರ್ಗದ ಜವಾಬ್ದಾರಿಯಾಗಿರುತ್ತದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿರುವುದರಿಂದ ಕಾರ್ಮಿಕ ವರ್ಗ  ಮತ್ತು ಆಡಳಿತ ವರ್ಗಕ್ಕೆ ಸರಕಾರದ ಸುತ್ತೋಲೆಗಳ ಸಾರಾಂಶ ತಿಳಿಯಲು ಕನ್ನಡದ ಅಗತ್ಯವಿದೆ.
  • ಸಂಸ್ಥೆಗಳಲ್ಲಿ ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಂಡು ಬಳಕೆಗೆ ಬರುವ ಆಚಾರ ಸಂಹಿತೆಗಳನ್ನು ಎಲ್ಲ ಸ್ತರದ ಉದ್ಯೋಗಿಗಳಿಗೆ ತಲುಪಿಸಬೇಕಾದಲ್ಲಿ ಕನ್ನಡ ಭಾಷೆಯ ಬಳಕೆ ಅಗತ್ಯ.
  • ಸರಕಾರದಿಂದ ಶಾಸನಾತ್ಮಕವಾಗಿ ದೊರಕುವ ಸೌಲಭ್ಯಗಳಾದ ಪಿ.ಎಫ್, ಇ.ಎಸ್.ಐ, ಗ್ರ್ಯಾಚುಟಿಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಬೇಕಾದಲ್ಲಿ ಕನ್ನಡದಲ್ಲಿ ಸಂವಹಿಸುವುದು ಅನಿವಾರ್ಯ.
  • ಸ್ಥಳೀಯ ಆಡಳಿತ ಮಂಡಳಿಗಳಾದ ಪಂಚಾಯತ, ಬಿ.ಬಿ.ಎಂ.ಪಿ., ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಲು ಮಾನವ ಸಂಪನ್ಮೂಲ ವಿಭಾಗಕ್ಕೆ ಕನ್ನಡ ಅಗತ್ಯವಾಗಿದೆ.
  • ಸಂಸ್ಥೆಗೆ ಸಂಬಂಧಪಟ್ಟ ಕಾನೂನುಗಳ ಅರಿವು ಎಲ್ಲ ಉದ್ಯೋಗಿಗಳಿಗೆ ಇರುವುದು ಕಾನೂನಿನ ನಿಯಮವಾಗಿದೆ, ಆದ್ದರಿಂದ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ನಿಯಮಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಬಿತ್ತರಿಸಬೇಕಾಗುತ್ತದೆ.
  • ಸಂಸ್ಥೆಯ ಕಾರ್ಮಿಕ ಸಂಘಟನೆಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಕನ್ನಡ ಭಾಷೆಯ ಬಳಕೆ ಅಗತ್ಯವಾಗಿರುತ್ತದೆ.
 
ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಕನ್ನಡ ಬಳಕೆಗೆ ಎದುರಾಗುವ ಅಡೆತಡೆಗಳು
ಕನ್ನಡಕ್ಕೆ ಅಗಾಧವಾದ ಇತಿಹಾಸವಿದ್ದು ಕೋಟಿಗಟ್ಟಲೆ ಜನರ ಬಳಕೆಯ ಭಾಷೆಯಾಗಿದ್ದರೂ, ಸಂಸ್ಥೆಗಳಲ್ಲಿ ಕನ್ನಡ ಬಳಕೆಗೆ ಮಾನವ ಸಂಪನ್ಮೂಲ ಅಧಿಕಾರಿ ಅಥವಾ ಯಾವುದೇ ಕನ್ನಡಿಗನೂ ಸಾಕಷ್ಟು ಪರದಾಡಬೇಕಾಗುತ್ತದೆ. ಕೇವಲ ಕನ್ನಡ ಭಾಷೆಯಲ್ಲಿ ಪರಿಣಿತಿ ಹೊಂದಿ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.
  • ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ವ್ಯವಸ್ಥೆಯಲ್ಲಿ ಆದಂತಹ ಸಂಚಲನ ಭಾಷೆ, ಪ್ರದೇಶಗಳ ಹಂಗಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಕಂಪನಿಗಳು ತಮ್ಮ ಉದ್ದೇಶಗಳನ್ನು ಎಲ್ಲ ಭಾಷಿಕರಿಗೂ ಸಂಯೋಜಿಸಲು ಅವರಿಗೆ ಅರ್ಥವಾಗುವ ಭಾಷೆಯ ಬಳಕೆ ಅನಿವಾರ್ಯವಾಗಿದೆ.
  • ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ ಆಡಳಿತ ವಿಭಾಗವನ್ನು ಆಕ್ರಮಿಸಿಕೊಳ್ಳುವ ವಿದೇಶಿಗರಿಗೆ ಕಂಪನಿಯ ಪ್ರಗತಿ ಮತ್ತು ಸವಾಲುಗಳನ್ನು ಪರಿಚಯಿಸಬೇಕಾದರೆ ಆಂಗ್ಲ ಭಾಷೆಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ.
  • ಜನಸಂಖ್ಯೆ ಶರವೇಗದಲ್ಲಿ ಬೆಳೆದಿದ್ದರೂ ಸಂಸ್ಥೆಗಳಿಗೆ ಅಗತ್ಯವಿರುವ ನುರಿತ ಉದ್ಯೋಗಿಗಳನ್ನು ಒದಗಿಸುವಲ್ಲಿ ವಿಫಲರಾಗುತ್ತಿದ್ದೇವೆ. ಉದ್ಯೋಗಕ್ಕೆ ಅರ್ಹ ಆಕಾಂಕ್ಷಿಗಳ ಕೊರತೆಯಿದ್ದು, ಅನಿವಾರ್ಯಕ್ಕೆ ಅನ್ಯಭಾಷಿಕರಿಗೆ ಮಣೆ ಹಾಕಬೇಕಿದೆ.
  • ಬಹುರಾಷ್ಟ್ರೀಯ ಕಂಪನಿಗಳು ನಿಯಂತ್ರಿಸಲ್ಪಡುವುದು ಪರದೇಶದ ಯಾವುದೋ ಒಂದು ಸ್ಥಳದ ಮುಖ್ಯ ಕಛೇರಿಗಳಿಂದ, ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಕೊರತೆ ಅವರು ನಿರ್ಧರಿಸುವ ನಿಯಮಗಳಲ್ಲಿ ಹೆಚ್ಚಾಗಿರುತ್ತವೆ.
  • ದಿನಕಳೆದಂತೆ ಮಾರುಕಟ್ಟೆಗಳು ವಿಸ್ತಾರ ರೂಪವನ್ನು ಪಡೆಯುತ್ತಿದ್ದು, ಸಂಸ್ಥೆಯ ಅಭಿವೃದ್ಧಿ ಮತ್ತು ಪ್ರತಿಷ್ಠೆಯ ಉದ್ದೇಶದಿಂದ ಅನ್ಯ ಭಾಷೆಗಳ ಬಳಕೆ ಅನಿವಾರ್ಯವಾಗುತ್ತಾ ಹೋಗುತ್ತದೆ.
  • ಸ್ಥಳೀಯವಾಗಿ ತಾಂತ್ರಿಕ ಜ್ಞಾನದ ಕೊರತೆಯಿದ್ದು, ಅನಿವಾರ್ಯ ಕಾರಣಗಳಿಂದ ಮುಂದುವರೆದ ದೇಶಗಳ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕನ್ನಡ ಭಾಷೆ ಕಡೆಗಣನೆಗೆ ಒಳಪಡುತ್ತದೆ.
  • ಮುಖ್ಯವಾಗಿ ಐ.ಟಿ. ವಿಭಾಗದಲ್ಲಿ ಬೆಂಗಳೂರು ಐ.ಟಿ. ರಾಜಧಾನಿಯಾಗಿ ಮಾರ್ಪಟ್ಟಿದೆ. ಜಗತ್ತಿನ 500 ಐ.ಟಿ. ಕಂಪನಿಗಳಲ್ಲಿ 400 ಕ್ಕೂ ಹೆಚ್ಚು ಕಂಪನಿಗಳು ಬೆಂಗಳೂರಿನಲ್ಲಿ ಅಂಗಸಂಸ್ಥೆಗಳನ್ನು ಹೊಂದಿವೆ. 370 ಕ್ಕೂ ಹೆಚ್ಚು ಇದರ ಸಂಶೋಧನಾ ವಿಭಾಗಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಭಾಗದಲ್ಲಿ 10 ಲಕ್ಷ ನೇರ ಉದ್ಯೋಗಿಗಳು ಮತ್ತು 25 ಲಕ್ಷ ಪರೋಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಇಂಗ್ಲೀಷ್ ಭಾಷೆಯು ಅನಿವಾರ್ಯವಾಗಿ ಪರಿಣಮಿಸುತ್ತದೆ.
 
ಸರೋಜಿನಿ ಮಹಿಷಿ ವರದಿಯ ಅನುಷ್ಠಾನದಲ್ಲಿ ಮಾನವ ಸಂಪನ್ಮೂಲ ವಿಭಾಗ ನಿರ್ವಹಿಸಬೇಕಾದ ಕಾರ್ಯಗಳು :
ಈ ವರದಿಯ ಕನ್ನಡಿಗರ ಉದ್ಯೋಗ ಭದ್ರತೆಯ ಉದ್ದೇಶದಿಂದ ರಚಿತವಾಗಿದ್ದು, ಅದಕ್ಕೆ ಪೂರಕವಾದ ಕೆಲವು ಅಂಶಗಳನ್ನು ಪಟ್ಟಿ ಮಾಡಿ ಸರ್ಕಾರದ ಮುಂದೆ ಇಡಲಾಗಿದೆ. ಇದರ ಭಾಗಶಃ ಅನುಷ್ಠಾನವು ಆಗಿದ್ದರೂ ಸಹ ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿಲ್ಲ. ಮಾನವ ಸಂಪನ್ಮೂಲ ವಿಭಾಗದ ಸಮರ್ಪಣಾ ಭಾವದಿಂದ ಮಾಡುವ ಸೇವೆ ಈ ವರದಿ ಅನುಷ್ಠಾನದ ಜೊತೆಗೆ ಕನ್ನಡದ ಉಳಿವು ಮತ್ತು ಕನ್ನಡಿಗರ ಪ್ರಗತಿಗೆ ಸಹಕಾರಿಯಾಗಲಿದೆ.
ಸರೋಜಿನಿ ಮಹಿಷಿ ವರದಿಯ ಪ್ರಮುಖ ಶಿಫಾರಸ್ಸುಗಳು
  • ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ
    - ಡಿ ದರ್ಜೆಯ 100 ಪ್ರತಿಶತ ಉದ್ಯೋಗಿಗಳು ಕನ್ನಡಿಗರೇ ಆಗಿರಬೇಕು.
    - ಮೇಲ್ವಿಚಾರಕ ಹುದ್ದೆಗಳಲ್ಲಿ 80% ಮೀಸಲಾತಿ
    - ಆಡಳಿತ ಮಂಡಳಿಯ ಹುದ್ದೆಗಳಲ್ಲಿ 65% ಕನ್ನಡಿಗರಿಗೆ ಮೀಸಲಾತಿ ನೀಡಬೇಕು
  • ಖಾಸಗಿ ಸಂಸ್ಥೆಗಳಿಗೆ ಎಲ್ಲ ವಿಭಾಗದಲ್ಲಿ ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ನುರಿತ ತಾಂತ್ರಿಕ ಸಿಬ್ಬಂದಿಗಳ ಅಗತ್ಯವಿದ್ದಲ್ಲಿ ಮಾತ್ರ ಪರಭಾಷಿಕರ ನೇಮಕಾತಿಗೆ ಅವಕಾಶವಿದೆ.
  • ಉದ್ಯೋಗಾರ್ಥಿಗಳ ನೇಮಕಾತಿಗೆ ಉದ್ಯೋಗ ವಿನಿಮಯ ಕಛೇರಿಗಳನ್ನು ಸಂಪರ್ಕಿಸಿ ಸ್ಥಳೀಯರಿಗೆ ಆದ್ಯತೆ ನೀಡುವುದು.
  • ವಿಭಾಗದ ಮುಖ್ಯ ಅಧಿಕಾರಿಗಳು ಮತ್ತು ಕಾರ್ಮಿಕ ಕಲ್ಯಾಣ ಅಧಿಕಾರಿಗಳಾಗಿ ಕನ್ನಡಿಗರನ್ನೇ ನೇಮಿಸುವುದು.
  • ಎಲ್ಲ ಬ್ಯಾಂಕ್‍ಗಳು ತಮ್ಮ ಕಾರ್ಯ ನಿರ್ವಹಣೆಯಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸುವುದು. ಈ ಮೂಲಕ ಗ್ರಾಹಕ ಸೇವೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು.
  • ಸಂಸ್ಥೆಗಳ ಸ್ಥಾಪನೆಯ ಉದ್ದೇಶದಿಂದ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು, ಕಡಿಮೆ ಸಮಯಾವಕಾಶದಲ್ಲಿ ಸಂಸ್ಥೆಗಳು ಕಾರ್ಯಾರಂಭ ಮಾಡುವುದು.
  • ಎಲ್ಲ ಸಂಸ್ಥೆಗಳು ಪ್ರತಿ ವರ್ಷ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಿದ ವರದಿಯನ್ನು ಸರಕಾರ ನೇಮಿಸಿದ ಸಂಸ್ಥೆಗಳಿಗೆ ನೀಡುವುದು ಕಡ್ಡಾಯವಾಗಿರುತ್ತದೆ.
  • ಕನ್ನಡಿಗರ ಬಗ್ಗೆ ಅನುಕಂಪ ಹೊಂದಿದ ಮತ್ತು ಕನ್ನಡಿಗರ ಅಭಿವೃದ್ಧಿಗೆ ಸ್ಪಂದಿಸುವ ಅಧಿಕಾರಿಗಳನ್ನು ಮಾತ್ರ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು.
  • ಉದ್ಯೋಗ ಸಂದರ್ಶನಗಳಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು.
  • ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಭಾಷೆಯ ಒಂದು ವಿಷಯವನ್ನು ಕಡ್ಡಾಯವಾಗಿ ಆಯೋಜಿಸಬೇಕು.
  • ಸಂಸ್ಥೆಯ ಪ್ರಮುಖ ಯೋಜನೆ ಮತ್ತು ಗುತ್ತಿಗೆಯನ್ನು ಕನ್ನಡಿಗರಿಗೆ ನೀಡಬೇಕು, ಅದರ ಜೊತೆಗೆ ಗುತ್ತಿಗೆದಾರರು ಕೆಲಸಕ್ಕೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು.
  • ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯಾಗಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಹೆಚ್ಚಿನ ಉದ್ಯೋಗಿಗಳು ಕನ್ನಡಿಗರಾಗಿರಲು ಪ್ರೇರೇಪಿಸಬೇಕು.
  • ಸಂಸ್ಥೆಯಲ್ಲಿ ಇರುವ ಉದ್ಯೋಗ ಅವಕಾಶಗಳನ್ನು ಕರ್ನಾಟಕದಲ್ಲಿ ಹೆಚ್ಚು ಬೇಡಿಕೆಯುಳ್ಳ ದಿನಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಕನ್ನಡಿಗರ ನೇಮಕಾತಿಗೆ ಪ್ರೇರೇಪಿಸಬೇಕು.
ಮಾನವ ಸಂಪನ್ಮೂಲ ವಿಭಾಗವು ನಿಷ್ಠೆಯಿಂದ ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳ್ಳಲು ಸಹಕರಿಸಿದರೆ ಎಲ್ಲ ಸಂಸ್ಥೆಗಳಲ್ಲಿ ಕನ್ನಡದ ಉಳಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಿದಂತೆ ಆಗುತ್ತದೆ.
 
ಸಂಸ್ಥೆಯಲ್ಲಿ ಕನ್ನಡ ಉಳಿಕೆಗೆ ಮಾನವ ಸಂಪನ್ಮೂಲ ವಿಭಾಗ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳು
ಕನ್ನಡ ಭಾಷೆಯ ಉಳಿವಿಗಾಗಿ ಒಂದು ಸಂಸ್ಥೆಯ ಒಳಗೆ ಮಾನವ ಸಂಪನ್ಮೂಲ ಅಧಿಕಾರಿಗಳು ತಮ್ಮ ಅಧಿಕಾರದ ಪರಿಧಿಯಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಅವುಗಳೆಂದರೆ,
  • ಸಂಸ್ಥೆಯಲ್ಲಿ ನಡೆಯುವ ಹೆಚ್ಚಿನ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನಿರ್ವಹಿಸುವುದು.
  • ಸಾಧ್ಯವಿರುವ ಎಲ್ಲ ಸಂಪರ್ಕ ಸಾಧನಗಳು ಕನ್ನಡದಲ್ಲಿಯೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.
  • ಸೂಚನಾ ಫಲಕದಲ್ಲಿ ಕನ್ನಡದ ಸುತ್ತೋಲೆಗಳಿಗೆ ಪ್ರಾಮುಖ್ಯತೆ ನೀಡುವುದು.
  • ಸಂಸ್ಥೆಯ ಆಚಾರ ನೀತಿ ಸಂಹಿತೆ ಮತ್ತು ಎಲ್ಲ ಕಾನೂನು ಕಟ್ಟಳೆಗಳನ್ನು ಕನ್ನಡದಲ್ಲಿಯೂ ಬಿತ್ತರಿಸುವುದು.
  • ಸಂದರ್ಶನಗಳು ಮತ್ತು ಕಾರ್ಯದಕ್ಷತೆಯನ್ನು ಅವಲೋಕಿಸುವ ಸಂದರ್ಭಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡುವುದು.
  • ಸಂಸ್ಥೆಗಳು ನಡೆಸುವ ಸಾಮುದಾಯಿಕ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ, ಕನ್ನಡ ಪರ ವೈಚಾರಿಕ ವಿಚಾರಗಳಿಗೆ, ಕನ್ನಡ ಪರ ಕಾರ್ಯನಿರ್ವಹಿಸುವ ಸರಕಾರೇತರ ಸಂಸ್ಥೆಗಳಿಗೆ ಸಹಕಾರವನ್ನು ಒದಗಿಸುವುದು.
  • ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯ ಭಾಷಿಕರಿಗೆ ಅಗತ್ಯ ತರಬೇತಿಗಳ ಮೂಲಕ ಕನ್ನಡ ಕಲಿಯುವಂತೆ ಪ್ರೇರೇಪಿಸುವುದು.
  • ಹೊಸ ತಲೆಮಾರಿನ ಉದ್ಯೋಗಿಗಳಲ್ಲಿ ಕನ್ನಡ ಪರ ಚಿಂತನೆಗಳನ್ನು ಬೆಳೆಸುವುದು / ಹೆಚ್ಚಿಸುವುದು.
  • ಉದ್ಯೋಗಿಗಳ ಜ್ಞಾನಾರ್ಜನೆಗೆ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ಒದಗಿಸುವುದು.
  • ಸಂಸ್ಥೆಯ ವಾರ್ಷಿಕ ವರದಿಗಳನ್ನು ಕನ್ನಡದಲ್ಲಿ ಮಂಡಿಸಿ ಕನ್ನಡಿಗರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದು.
  • ಕನ್ನಡದ ಗೌರವ ದ್ಯೋತಕವಾದ ಕನ್ನಡಪರ ಆಚರಣೆಗಳನ್ನು ಸಂಸ್ಥೆಯಲ್ಲಿ ಪ್ರೇರೇಪಿಸುವುದು.
  • ಸಂಸ್ಥೆಯ ಕಾರ್ಯನಿರ್ವಾಹಕರ ಸಭೆಗಳನ್ನು ಮತ್ತು ಸಭಾ ವರದಿಗಳಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವುದು.
  • ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅಗತ್ಯವಾದ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ಒದಗಿಸಲು ಮಾನವ ಸಂಪನ್ಮೂಲ ವಿಭಾಗ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಈ ಮೂಲಕ ಸಂಸ್ಥೆಯ ಗುರಿ-ಉದ್ದೇಶಗಳು, ಸಂಜ್ಞಾಫಲಕಗಳು ಆಂಗ್ಲ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಇರುವಂತೆ ನೋಡಿಕೊಳ್ಳಬೇಕು.
  • ಅನ್ಯ ಭಾಷಿಕರಿಗೆ ಅನುಕೂಲವಾಗುವಂತೆ ಕನ್ನಡದ ಶಬ್ದಗಳನ್ನು ಪರಿಚಯಿಸುವುದು ಮತ್ತು ಕನ್ನಡದಲ್ಲಿ ವ್ಯವಹರಿಸಲು ಪ್ರೋತ್ಸಾಹಿಸುವುದು.
 
ನಿದರ್ಶನಗಳು :
ಭಾಷೆಯ ಉಳಿಕೆಗೆ ಅದ್ಭುತ ಮಾದರಿಯೆಂದರೆ, ಇಸ್ರೇಲಿಗಳು. ನಶಿಸಿ ಹೋದ ಹೀಬ್ರೂ ಭಾಷೆಯನ್ನು ಮರಳಿ ಜನಜೀವನಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗೆಯೇ ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ ಎಂದು ಕೊರಗುವ ಬದಲು ಎಲ್ಲ ಸ್ತರದ ಜನರು ತಮ್ಮಿಂದಾಗಬಹುದಾದ ಕೊಡುಗೆಗಳನ್ನು ನೀಡುವ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಪ್ರಜ್ವಲಿಸುವಂತೆ ಮಾಡಬಹುದು. ಅದಕ್ಕಾಗಿ ಹಲವಾರು ಮಾದರಿಗಳು ನಮ್ಮ ಮಧ್ಯೆಯೇ ನಮಗೆ ದೊರಕುತ್ತದೆ. ಗಳಗನಾಥರಂತೆ ಕನ್ನಡ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಊರಿಂದ ಊರಿಗೆ ಮಾರಬೇಕಾದ ಶ್ರಮವಿಲ್ಲ. ತಮ್ಮ ತಮ್ಮ ವೃತ್ತಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕನ್ನಡ ಬಳಸಿದರೆ ಸಾಕು ಎನಿಸುತ್ತದೆ.

ಲೇಖಕರು ಕಂಡ ಕಡಿಮೆ ಅವಧಿಯ ಮಾನವ ಸಂಪನ್ಮೂಲ ವಿಭಾಗದ ಅನುಭವದಲ್ಲಿ ಎರಡು ವಿಶೇಷ ನಿದರ್ಶನಗಳನ್ನು ನಿಮಗೆ ನೀಡಬಹುದಾಗಿದೆ.
  1. ಒಬ್ಬ ಮೇಲ್ವಿಚಾರಕರು ಎಲ್ಲ ಕಾರ್ಮಿಕರಿಗೆ ಹತ್ತಿರವಾಗಿದ್ದು ಆಂಗ್ಲ ಭಾಷೆಯಲ್ಲಿ ಜರುಗುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ಕನ್ನಡದ ಅವತರಣಿಕೆಗೆ ಬರುವಂತೆ ಪ್ರೋತ್ಸಾಹಿಸುತ್ತಿದ್ದರು. ಕಾರ್ಮಿಕ ವರ್ಗದಲ್ಲಿ ಸಿಂಹಪಾಲು ಇದ್ದ ಕನ್ನಡಿಗರಿಗೆ ಈ ಕಾರಣದಿಂದ ಪ್ರೀತಿಪಾತ್ರರಾಗಿದ್ದರು. ಕಂಪನಿಯಲ್ಲಿ ಇರುವ ಚಿಕ್ಕ ಪುಟ್ಟ ಮೂಲಭೂತ ಸಮಸ್ಯೆಗಳಿಗೆ ಮುಂದೆ ನಿಂತು ಆಡಳಿತ ಮಂಡಳಿಗೆ ಅಹವಾಲು ಸಲ್ಲಿಸುತ್ತಿದ್ದರು. ಬರಬರುತ್ತಾ ಕಾರ್ಮಿಕ ಸಂಘಟನೆಯೇ ಇಲ್ಲದ ಒಂದು ಕಂಪನಿಯಲ್ಲಿ ಕಾರ್ಮಿಕ ನಾಯಕರಂತೆ ಕಾರ್ಯನಿರ್ವಹಿಸುತ್ತಿದ್ದರು. ಇದನ್ನು ಆಡಳಿತ ಮಂಡಳಿಗೆ ಸಹಿಸಲಾಗಿಲ್ಲ. ಹಲವು ಬಾರಿ ಮೌಖಿಕ ಎಚ್ಚರಿಕೆ ನೀಡಿದ್ದರೂ ಅವರ ಕನ್ನಡ ಮತ್ತು ಕಾರ್ಮಿಕ ಪರ ಕೆಲಸ ನಿರಂತರವಾಗಿ ಮಾಡುತ್ತಿದ್ದರು. ಇದರಿಂದ ಕುಪಿತಗೊಂಡ ಆಡಳಿತ ವರ್ಗ ಅವರ ವರ್ಗಾವಣೆಗೆ ಪ್ರಯತ್ನಿಸಿತು. ಆದರೆ ಸಂಸ್ಥೆಯಲ್ಲಿದ್ದ ಎಲ್ಲ ಕಾರ್ಮಿಕರು ಒಕ್ಕೊರಲಿನಿಂದ ಅವರ ಉಳಿವಿಗೆ ಪ್ರಯತ್ನಿಸಿ ಯಶಸ್ಸು ಕಂಡರು.
  2. ಕಂಪನಿಯ ರಾಸಾಯನಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲರೂ ಕನ್ನಡಿಗರೇ ಆಗಿದ್ದರು. ಅದೊಂದು ವಿಭಾಗದಲ್ಲಿ ಆಗಿಂದಾಗ್ಗೆ ಅಪಘಾತಗಳು ಹೆಚ್ಚಾಗಿದ್ದವು. ಪರಿಹಾರ ಕಂಡುಕೊಳ್ಳುವಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು, ಕೈಗಾರಿಕಾ ಸುರಕ್ಷಣಾ ಅಧಿಕಾರಿಗಳು ವಿಫಲರಾಗಿ ಹೋಗಿದ್ದರು. ಅಲ್ಲಿಗೆ ಬಂದ ಹೊಸ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಇದೊಂದು ಬಿಡಿಸಲಾರದ ಸಮಸ್ಯೆಯಂತೆ ಗೋಚರಿಸುತ್ತಿತ್ತು. ಆಗಿಂದಾಗ್ಗೆ ರಾಸಾಯನಿಕ ಬಳಕೆಯ ವಿಭಾಗಕ್ಕೆ ಭೇಟಿ ನೀಡಿ ಅವರಿಗೆ ಸ್ಪಷ್ಟವಾಗಿ ಅರ್ಥವಾದ ವಿಷಯ ಅಲ್ಲಿ ಇರುವ ಯಾರಿಗೂ ಕನ್ನಡದ ಹೊರತು ಬೇರೆ ಭಾಷೆಯ ಜ್ಞಾನವಿಲ್ಲ, ಆದರೆ ಅವರಿಗೆ ನೀಡಿದ ವಸ್ತು ಸುರಕ್ಷಾ ಅಂಶಗಳ ಪಟ್ಟಿ (MSDS) ಕನ್ನಡ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯವಿತ್ತು. ತಕ್ಷಣ ಮಾನವ ಸಂಪನ್ಮೂಲ ಅಧಿಕಾರಿಗಳು ಕನ್ನಡಕ್ಕೆ ತರ್ಜುಮೆಗೊಳಿಸಿದ ಪ್ರತಿಯನ್ನು ನೀಡುವಂತೆ ಮಾಡಿದರು. ಇದರಿಂದ ರಾಸಾಯನಿಕ ಬಳಸುತ್ತಿದ್ದ ಕಾರ್ಮಿಕರು ಸುಲಭವಾಗಿ ಸುರಕ್ಷಾ ಕ್ರಮಗಳನ್ನು ಅನುಸರಿಸುವಂತೆ ಆಯಿತು. ಕ್ರಮೇಣ ಅಪಘಾತ ಪ್ರಮಾಣದಲ್ಲಿ ಇಳಿಕೆ ಕಂಡಿತು. ಇದರಿಂದ ಆರೋಗ್ಯ ಮತ್ತು ಸುರಕ್ಷೆಯ ಕುರಿತು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಆಯೋಜಿಸತೊಡಗಿದರು.
 
ಘೋಷಣೆ
ವೃತ್ತಿಯೇತರ ಅಭಿರುಚಿಯಾಗಿ ದಿನಪತ್ರಿಕೆ ಮತ್ತು ಮಾಸಪತ್ರಿಕೆಗಳಿಗೆ ಬರೆದ ಕಿಂಚಿತ್ತು ಅನುಭವವಿದೆ. ಈ ಲೇಖನವನ್ನು ರಾಜ್ಯಮಟ್ಟದ ಕನ್ನಡ ಮಾನವ ಸಂಪನ್ಮೂಲ ಸಮ್ಮೇಳನಕ್ಕಾಗಿ ಬರೆದದ್ದು ಈ ಮುಂಚೆ ಎಲ್ಲಿಯೂ ಪ್ರಕಟಣೆಗೆ ನೀಡಿಲ್ಲ. ಯಾವುದೇ ಲೇಖನ ಅಥವಾ ಕೃತಿಯನ್ನು ನಕಲು ಮಾಡದೆ ಸ್ವಂತ ಅನುಭವ ಮತ್ತು ಅಂತರ್ಜಾಲದ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿದೆ.
 
ಸಾರಾಂಶ
ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗ ಹೃದಯ ಭಾಗವಿದ್ದಂತೆ. ಸಂಸ್ಥೆಯ ಎಲ್ಲ ವಿಭಾಗಗಳು ಚಟುವಟಿಕೆಯಿಂದ ಕಾರ್ಯನಿರ್ವಹಿಸುವಲ್ಲಿ ಮಾನವ ಸಂಪನ್ಮೂಲ ವಿಭಾಗ ಹೆಚ್ಚಿನ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಈ ವಿಭಾಗದ ಸಕ್ರೀಯ ಪಾಲ್ಗೊಳ್ಳುವಿಕೆ ಕನ್ನಡ ಬಳಕೆಯನ್ನು ಹೆಚ್ಚಿಸಬಲ್ಲದ್ದಾಗಿದೆ. ಲೇಖನವು ಭಾಷಾ ವೈವಿಧ್ಯತೆಯನ್ನು ತಿಳಿಸುತ್ತಾ ಕನ್ನಡ ಭಾಷೆಯ ಅಗಾಧತೆಯ ಮೇಲೆ ಬೆಳಕು ಚೆಲ್ಲುತ್ತದೆ. ಮುಂದುವರೆದು ಕರ್ನಾಟಕದಲ್ಲಿನ ಸಂಪನ್ಮೂಲಗಳನ್ನು ಮತ್ತು ಮಾನವ ಸಂಪನ್ಮೂಲಗಳನ್ನು ಹಲವು ದೃಷ್ಟಿಕೋನದಲ್ಲಿ ವಿಶ್ಲೇಷಿಸಲಾಗಿದೆ.
​
ಮಾನವ ಸಂಪನ್ಮೂಲ ವಿಭಾಗ ಕನ್ನಡವನ್ನು ಸಂಸ್ಥೆಗಳಲ್ಲಿ ಉಳಿಸುವಲ್ಲಿ ಎದುರಿಸುವ ಸಮಸ್ಯೆಗಳ ಜೊತೆಗೆ ಅವರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ತಿಳಿಸಲಾಗಿದೆ. ಮುಖ್ಯವಾಗಿ ಸರೋಜಿನಿ ಮಹಿಷಿ ವರದಿಯ ಅನುಷ್ಠಾನದಲ್ಲಿ ಮಾನವ ಸಂಪನ್ಮೂಲ ವಿಭಾಗ ನಿರ್ವಹಿಸಬೇಕಾದ ನಿರ್ಣಾಯಕ ಪಾತ್ರವನ್ನು ವಿಶ್ಲೇಷಿಸಲಾಗಿದೆ. ಈ ವಿಷಯಗಳಿಗೆ ತಕ್ಕಂತೆ ದತ್ತಾಂಶಗಳನ್ನು ಅಂತರ್ಜಾಲದಿಂದ ಒದಗಿಸಲಾಗಿದೆ.

1 Comment
ಗಂಗಾಧರ.ಎಂ.ಜಿ.
9/16/2018 10:50:54 pm

ತಪ್ಪೊಪಿಗೆ ಮತ್ತು ಮುಚ್ಚಳಿಕೆ ಇವೆರಡರಲ್ಲಿನ ವ್ಯತ್ಯಾಸಗಳು. ಹಾಗೂ ಇವೆರಡರಲ್ಲಿನ ಒಳಗೊಂಡಿರಬೇಕಾದ ಕಾರ್ಯಗತಗೊಳಿಸುವ, ಕಾರ್ಯರೂಪಕ್ಕೆ ತರುವಂತಹ ಅಂಶಗಳಾವುವು. ಹಾಗೂ ಇವುಗಳನ್ನು ಮಾನ್ಯತೆ ಮಾಡುವ ಆಧ್ಯತೆಗಳೇನು ದಯವಿಟ್ಟು ತಿಳಿಸಿ.

Reply

Your comment will be posted after it is approved.


Leave a Reply.

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    PoSH
    Video



    Six-Days
    Labour Laws & Labour Codes Certification Program

    Know More

    Picture
    Know More

    Picture

    MHR LEARNING ACADEMY

    Get it on Google Play store
    Download App
    Online Courses

    Picture
    WhatsApp

    Picture

    POSH

    Know More

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    Human Resources And Labour Law Classes

    RSS Feed


site MAP


SITE

  • ​HOME
  • ABOUT US
  • ​BLOG
  • ​COLLABORATE WITH NIRATHANKA
  • ​​CONTACT US

OUR OTHER WEBSITES

  • WWW.NIRUTAPUBLICATIONS.ORG
  • ​WWW.HRKANCON.COM

JOB

  • FIND FREELANCE JOBS
  • CURRENT JOB OPENINGS

POSH

  • POSH
  • POSH CLIENTS
  • POSH BLOG
  • INTERNAL COMMITTEE
  • OUR ASSOCIATES

HR Kannada Conference

  • HR KANNADA CONFERENCE
  • ​THE BEST WOMEN EMPOWERMENT ORGANISATION AWARD
  • ​CSR EXCELLENCE AWARD

Nirathanka Club House

  • NIRATHANKA CLUB HOUSE

TRAINING

  • TRAINING PROGRAMMES
  • CERTIFICATE TRAINING COURSES

PUBLICATIONS

  • LEADER'S TALK
  • NIRUTA'S READ & WRITE INITIATIVE
  • ​TRANSLATION & TYPING

SUBSCRIBE



JOIN OUR ONLINE GROUPS


JOIN WHATSAPP BROADCAST


ONLINE STORE



Copyright Nirathanka 2021,    Website Designing & Developed by: www.mhrspl.com
  • HOME
  • About Us
    • TESTIMONIALS
  • Our Services
    • Corporate Social Responsibility
    • Tree Plantation Project
    • Awareness Programme
    • Rural & Community Development
  • Online Store
  • HR Kannada Conference
  • POSH
    • PoSH Blog
    • Our Clients
    • Our Associates
    • Want to Become an External Member for an Internal Committee?
  • Training Modules
    • Labour Laws & Labour Codes
    • Winning
  • BLOG
  • Collaborate with Nirathanka
    • Join Our Online Groups
  • Nirathanka Club House
  • Media Mentions
    • Photo Gallery
    • Video Gallery
  • Contact Us